ಸೆಂಟ್ರಲ್ ಮಾರ್ಕೆಟ್ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಸಂಚಾರವನ್ನೇ ಅಸ್ತವ್ಯಸ್ತಗೊಳಿಸುತ್ತಿರುವುದು ಮಾತ್ರವಲ್ಲದೆ ಹಲವಾರು ಜನರನ್ನು ಅನಗತ್ಯ ಸಂಕಷ್ಟಗಳಿಗೆ ಗುರಿ ಮಾಡುತ್ತಿದೆ.
ಮಂಗಳೂರು ನಗರದ ಯೋಜಿತವಲ್ಲದ ಅಭಿವೃದ್ಧಿ ಮತ್ತು ಲೆಕ್ಕವಿಲ್ಲದ ವಾಹನಗಳ ಬೆಳವಣಿಗೆ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಸವಾಲಾಗಿದೆ. ನಗರದಲ್ಲಿ ಅಂಗಡಿಗಳ ಮುಂದೆ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದು ಸರ್ವೇಸಾಮಾನ್ಯವಾಗಿ ಕಂಡು ಬರುವ ದೃಶ್ಯ. ವಾಹನಗಳ ಪಾರ್ಕಿಂಗ್ ಅವ್ಯವಸ್ಥೆಯ ಜೊತೆಗೆ ಹಲವು ಎತ್ತರದ ಕಟ್ಟಡಗಳು ಮತ್ತು ಅಪಾರ್ಟಮೆಂಟುಗಳು ಇಲ್ಲಿಗೆ ಭೇಟಿ ನೀಡುವ ಗ್ರಾಹಕರನ್ನು ಕಟ್ಟಡಗಳ ಪ್ರಾಂಗಣದಿಂದ ವಾಹನಗಳ್ನು ಹೊರಗೆ ನಿಲ್ಲಿಸುವಂತೆ ಮಾಡುತ್ತವೆ. “ಇಂತಹ ಪಾರ್ಕಿಂಗ್ ಅಶಿಸ್ತು ಮತ್ತು ಅವೈಜ್ಞಾನಿಕ ಪಾರ್ಕಿಂಗ್ ನಗರದಲ್ಲಿ ಹೆಚ್ಚಾಗಿ ಕಂಡುಬಂದಿದೆ” ಎಂದು ಹಿರಿಯ ಟ್ರಾಫಿಕ್ ವಾರ್ಡನ್ ಹೇಳಿದ್ದಾರೆ.
ಮಿಲಾಗ್ರಿಸ್, ಲೈಟ್ ಹೌಸ್ ಹಿಲ್ ರೋಡು, ಕೆ ಎಸ್ ರಾವ್ ರೋಡು, ಸ್ಟೇಟ್ ಬ್ಯಾಂಕ್ ಸಮೀಪದ ಫಿಶ್ ಮಾರ್ಕೆಟ್, ಕರಂಗಲ್ಪಾಡಿಯ ಸೈಂಟ್ ಅಲೋಶಿಯಸ್ ಸ್ಕೂಲ್ ಪ್ರವೇಶ ಭಾಗದಲ್ಲಿ, ಬಲ್ಮಠ ರೋಡು-ಜ್ಯೋತಿ ರಸ್ತೆ, ಬಂಟ್ಸ್ ಹಾಸ್ಟೆಲ್ ಸರ್ಕಲ್, ಬಿಜೈ-ಕೆಸ್ಸಾರ್ಟಿಸಿ ರಸ್ತೆ ಮತ್ತಿತರ ಸ್ಥಳಗಳಲ್ಲಿರುವ ಆಟೋ ಪಾರ್ಕುಗಳಲ್ಲಿ ರಿಕ್ಷಾಗಳು ತುಂಬಿಹೋಗಿರುವುದನ್ನು ಕಾಣಬಹುದು.

ಪಾರ್ಕಿಂಗ್ ಸಮಸ್ಯೆಗೆ ಕಾರಣಗಳು
ಕಟ್ಟಡಗಳನ್ನು ಕಟ್ಟುತ್ತಿರುವಂತೆ ಪಾರ್ಕಿಂಗ್ ವ್ಯವಸ್ಥೆಗೆ ಗಮನ ಹರಿಸುತ್ತಿಲ್ಲ. ಮಂಗಳೂರು ನಗರ ಪಾಲಿಕೆ ಕಟ್ಟಡಗಳಿಗೆ ಲೈಸನ್ಸ್ ನೀಡುವ ತರಾತುರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ನೋಡುತ್ತಿಲ್ಲ. ಟ್ರಾಫಿಕ್ ದಟ್ಟಣೆಯ ವೇಳೆ ಒಬ್ಬ ದ್ವಿಚಕ್ರ ವಾಹನಿಗ 5 ನಿಮಿಷದಲ್ಲಿ ತಲುಪುವ ಸ್ಥಳವನ್ನು ಕ್ರಮಿಸಲು 30 ನಿಮಿಷ ತೆಗೆದುಕೊಳ್ಳುತ್ತಾನೆ. ಈ ಟ್ರಾಫಿಕ್ ದಟ್ಟಣೆಗೆ ರಸ್ತೆ ಬದಿಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡಿರುವುದೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ಸ್ ಹೇಳಿದ್ದಾರೆ.
ಪಾರ್ಕಿಂಗ್ ಸಮಸ್ಯೆಗೆ ಪರಿಹಾರವೆಂದರೆ ಹೆಚ್ಚಿನ ಪಾರ್ಕಿಂಗ್ ವಲಯಗಳನ್ನು ನಿರ್ಮಿಸುವುದು, ಬಹುಮಟ್ಟದ ಪಾರ್ಕಿಂಗ್ ಕಾಂಪ್ಲೆಕ್ಸುಗಳನ್ನು ನಿರ್ಮಿಸುವುದು ಮತ್ತು ಬೇಕಾದಷ್ಟು ಪಾರ್ಕಿಂಗ್ ಸ್ಥಳಗಳನ್ನು ಹೊಂದಿರದ ಕಟ್ಟಡಗಳ ಪರವಾನಿಗೆ ರದ್ದುಪಡಿಸುವುದು ಇವೇ ಮೊದಲಾದ ಕ್ರಮಗಳಿಂದ ನಗರವನ್ನು ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಗೊಳಿಸಬಹುದು. ಪಾವತಿ ಪಾರ್ಕಿಂಗ್ ವ್ಯವಸ್ಥೆಯನ್ನು ನಗರದಲ್ಲಿ ಪರಿಚಯಿಸಲಾಗುವುದು ಇದು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಮನಪಾ ಮೇಯರ್ ಹರಿನಾಥ ಹೇಳಿದ್ದಾರೆ.
ಅಡ್ಡಾದಿಡ್ಡಿ ಪಾರ್ಕಿಂಗ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಇಂತಹ ವಾಹನ ಮಾಲಕರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದೆಂದು ಮಂಗಳೂರು ನಗರ ಸಹಾಯಕ ಪೊಲೀಸ್ ಕಮಿಷನರ್ ತಿಲಕಚಂದ್ರ ಹೇಳಿದ್ದಾರೆ.