ಹಂಗಾರಕಟ್ಟೆ ಬಾಳ್ಕುದ್ರು ಫಿಶ್ಮಿಲ್ ಘಟಕಕ್ಕೆ ಬೀಗ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಳೆದ ಹಲವು ದಿನಗಳಿಂದ ಸ್ಥಳೀಯರು ನಡೆಸುತ್ತಿದ್ದ ವ್ಯಾಪಕ ಪ್ರತಿಭಟನೆಗೆ ಜಯ ಸಂದಿದೆ. ಹಂಗಾರ ಕಟ್ಟೆಯ ಬಾಳ್ಕುದ್ರು ಶಾಲೆ ಸಮೀಪ ನಿರ್ಮಾಣಗೊಳ್ಳುತ್ತಿರುವ ಫಿಶ್ಮಿಲ್ ಘಟಕಕ್ಕೆ ಆಗಮಿಸಿದ ಏಸಿ ಇಲ್ಲಿನ ಘಟಕವನ್ನು ಪರಿಶೀಲನೆ ನಡೆಸಿ ಕೊನೆಗೂ ಬೀಗ ಹಾಕಿದ್ದಾರೆ. ಹೀಗಾಗಿ ಈ ಘಟಕವನ್ನು ವಿರೋಧಿಸಿ ಪರಿಸರದ ಗ್ರಾಮಸ್ಥರು ನಡೆಸುತ್ತಿದ್ದ ಧರಣಿ ಅಂತ್ಯಗೊಂಡಿದೆ.

ಧರಣಿ ನಿರತರಲ್ಲಿಗೆ ಆಗಮಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರದ ಸಹಾಯಕ ಕಮಿಷನರ್ ಶಿಲ್ಪನಾಗ್ ಸೇರಿದಂತೆ ಜನಪ್ರತಿನಿಧಿಗಳು ಅವರೊಂದಿಗೆ ಮಾತುಕತೆ ನಡೆಸಿ ಘಟಕಕ್ಕೆ ಬೀಗಮುದ್ರೆ ಹಾಕುವುದಾಗಿ ಹೇಳಿದರು.

ಇಲ್ಲಿನ ಬಾಳ್ಕುದ್ರು ಶಾಲೆಯ ಪಕ್ಕದಲ್ಲೇ ಪ್ರಾರಂಭಗೊಳ್ಳುತ್ತಿರುವ ಈ ಫಿಶ್ಮಿಲ್ ಮತ್ತು ಪೌಡರ್ ಘಟಕದಿಂದಾಗಿ ಪರಿಸರ ಕಲುಷಿತವಾಗುವುದಲ್ಲದೇ ಪುಟ್ಟ ಮಕ್ಕಳು ರೋಗರುಜಿನಗಳಿಗೆ ಈಡಾಗುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದರು. ಹೀಗಾಗಿ ಈ ಘಟಕವನ್ನು ಪ್ರಾರಂಭಿಸಬಾರದು ಎಂದು ಜ 18ರಿಂದ ಐರೋಡಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಗೊಂಡಿತು. ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಹಲವು ಮಂದಿ ಪಾಲ್ಗೊಂಡು ಉಗ್ರ ಪ್ರತಿಭಟನೆಯನ್ನು ನಡೆಸಿದ್ದರು.

ಫಿಶ್ಮಿಲ್ಲಿನಿಂದ ಕಾನೂನು ಉಲ್ಲಂಘನೆಯಾಗಿರುವುದು ಹಾಗೂ ಇದರಿಂದ ಪರಿಸರದ ಜನರಿಗಾಗುವ ಸಮಸ್ಯೆಗಳ ಕುರಿತು ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಸಹಾಯಕ ಕಮಿಷನರಿಗೆ ಮನದಟ್ಟು ಮಾಡಿದರು. ಇದಕ್ಕೆ ಸಂಬಂಧಿಸಿದ ಗ್ರಾ ಪಂ.ನಲ್ಲಿರುವ ಕಡತಗಳನ್ನು ಪರಿಶೀಲಿಸಿದ ಶಿಲ್ಪಾನಾಗ್, ಘಟಕಕ್ಕೆ ಭೇಟಿ ನೀಡಿದರು. ಅಲ್ಲಿಯೂ ಪರಿಶೀಲನೆ ನಡೆಸಿದ ಬಳಿಕ ಸಿ ಆರ್ ಝಡ್ ನಿಯಮ ಉಲ್ಲಂಘನೆಯಾಗುವುದನ್ನು ಮನದಟ್ಟು ಮಾಡಿಕೊಂಡು ಘಟಕಕ್ಕೆ ಬೀಗಮುದ್ರೆ ಹಾಕಲು ನಿರ್ಧರಿಸಿದರು.

ಘಟಕಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳ್ಳುವತನಕ ಯಾವುದೇ ಕಾಮಗಾರಿಯನ್ನು ನಡೆಸಬಾರದು ಎಂದು ತಾಕೀತು ಮಾಡಿದ ಅವರು, ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.