ಹಾಲ್ ಟಿಕೆಟಿನಿಂದ ವಂಚಿತರಾದ ಕುಂಬ್ರ ಕಾಲೇಜಿನ ವಿದ್ಯಾರ್ಥಿಗಳು

ಶಿಕ್ಷಕಿ ವಿರುದ್ಧ ಇಲಾಖೆಗೆ ದೂರು ನೀಡಲು ನಿರ್ಧಾರ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಶಿಕ್ಷಕಿಯ ವರ್ತನೆಯಿಂದಾಗಿ ಹಾಲ್ ಟಿಕೆಟಿನಿಂದ ವಂಚಿತರಾಗಿದ್ದು ಇದರಿಂದ ಆಕ್ರೋಶಗೊಂಡ ಮಕ್ಕಳ ಪೋಷಕರು ಶಿಕ್ಷಕಿ ವಿರುದ್ಧ ಇಲಾಖೆಗೆ ದೂರು ನೀಡಿದ್ದಾರೆ.

ಪಿಯು ವಿದ್ಯಾರ್ಥಿಗಳಾದ ಉಮ್ಮರ್, ತ್ವಾಹಾ ಮತ್ತು ಶಫೀಕುದ್ದೀನ್ ಎಂಬವರು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾರೆ. 3 ಮಂದಿ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಿನಲ್ಲಿ ತೇರ್ಗಡೆ ಹೊಂದಿದ್ದರು. ಕಲಿಕೆಯಲ್ಲಿ ಉತ್ತಮ ಅಂಕಗಳಿದ್ದರೂ ಹಾಲ್ ಟಿಕೆಟ್ ಸಿಗಬೇಕಾದಲ್ಲಿ ಬಯೋಲಜಿ ಪ್ರಾಕ್ಟಿಕಲ್ ಎಕ್ಸಾಮ್ ವಿಚಾರದಲ್ಲಿ ಶಿಕ್ಷಕಿ ಎಡವಟ್ಟು ಮಾಡಿದ್ದಾರೆ. ಇಲಾಖೆಗೆ ನೀಡಬೇಕಾದ ಕೆಲವೊಂದು ವರದಿಗಳನ್ನು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತಾರದೆ ನೇರವಾಗಿ ಇಲಾಖೆಗೆ ನೀಡಿದ್ದಾರೆ. ಇದು ಈಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರಿದೆ.

ಮಕ್ಕಳಿಗೆ ಹಾಲ್ ಟಿಕೆಟ್ ಸಿಗುವಲ್ಲಿ ಶಿಕ್ಷಕಿ ಉದ್ದೇಶಪೂರ್ವಕವಾಗಿ ಇಲಾಖೆಗೆ ವರದಿ ನೀಡದೆ ಮತ್ತು ಪ್ರಾಂಶುಪಾಲರ ಗಮನಕ್ಕೆ ತಾರದೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿದ ಪೋಷಕರು ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಮಕ್ಕಳಿಗೆ ಪರೀಕ್ಷೆಗೆ ಬರೆಯಲು ಅವಕಾಶ ನೀಡಬೇಕೆಂದು ಇಲಾಖೆಗೆ ಮನವಿ ಮಾಡಿದ್ದಾರೆ. ಶಿಕ್ಷಕಿಯ ವಿಚಾರದ ಕುರಿತು ಕಾಲೇಜಿನ ಅಧ್ಯಕ್ಷೆ ಶಕುಂತಳಾ ಶೆಟ್ಟಿಯವರಿಗೂ ದೂರು ನೀಡಿದ್ದಾರೆ.

ಪ್ರಾಂಶುಪಾಲರಲ್ಲಿ ಈ ಕುರಿತು ಕೇಳಿದರೆ, “ನಾನು ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಮಾಡಿಲ್ಲ, ಯಾರು ಅನ್ಯಾಯ ಮಾಡಿದ್ದಾರೋ ಅವರ ಬಳಿಯಲ್ಲಿಯೇ ಶಿಕ್ಷಕರು ನ್ಯಾಯ ಕೇಳಲಿ, ಹಾಲ್ ಟಿಕೇಟ್ ನೀಡುವಲ್ಲಿ ತನ್ನಿಂದಾದ ನೆರವನ್ನು ನೀಡಲು ನಾನು ರೆಡಿಯಾಗಿದ್ದೇನೆ, ಯಾವ ಉದ್ದೇಶದಿಂದ ಆ ರೀತಿ ಮಾಡಿದ್ದಾರೋ ನನಗೆ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.

“ಹಾಲ್ ಟಿಕೆಟ್ ವಂಚಿತಗೊಂಡವರು ಮೂವರೂ ಮುಸ್ಲಿಂ ವಿದ್ಯಾರ್ಥಿಗಳಾಗಿರುವ ಕಾರಣ ಪ್ರಕರಣವನ್ನು ಕೆಲವೊಂದು ಕೋಮುಶಕ್ತಿಗಳು ದೊಡ್ಡದು ಮಾಡುವ ಸಾಧ್ಯತೆ ಇರುವುದರಿಂದ ಇಲಾಖೆ ಚಾಣಾಕ್ಷತೆಯಿಂದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಎಂದು ಸ್ಥಳೀಯ ಶಾಲಾಭಿಮಾನಿಗಳು ಆಗ್ರಹಿಸಿದ್ದಾರೆ.

LEAVE A REPLY