ಅಂಗನವಾಡಿಯ ದಲಿತ ಮಕ್ಕಳಿಗೆ ಅರ್ಧ ಲೋಟ ಹಾಲು !

ಅಧಿಕಾರಿಗಳು ಅಂಗನವಾಡಿಗೆ ಬಂದಾಗ ಸ್ಥಳದಲ್ಲಿ ಸೇರಿದ ಗ್ರಾಮಸ್ಥರು

ನೆಲ್ಲಿಕಟ್ಟೆ ಸಹಾಯಕಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ದಲಿತ ಮಕ್ಕಳ ಮೇಲೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಸಿಡಿಪಿಒ ಮತ್ತು ಸ್ಥಳೀಯ ನಗರಸಭಾ ಸದಸ್ಯರು ಅಂಗನವಾಡಿಗೆ ಆಗಮಿಸಿ ಘಟನೆಯ ಕುರಿತು ವಿಚಾರಣೆ ನಡೆಸಿದರು. ಇದೇ ಸಂದರ್ಭ ಅಲ್ಲಿಗೆ ಆಗಮಿಸಿದ ಬ್ರಹ್ಮನಗರ ನಿವಾಸಿಗಳು ನಮ್ಮ ಮಕ್ಕಳನ್ನು ಇನ್ನು ಅಂಗವಾಡಿಗೆ ಕಳುಹಿಸುವುದಿಲ್ಲ, ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಪಟ್ಟು ಹಿಡಿದ ಘಟನೆಯೂ ನಡೆಯಿತು.

ನಗರಸಭಾ ಸ್ಥಳೀಯ ಸದಸ್ಯ ಶಕ್ತಿ ಸಿನ್ಹ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್, ಅಸಾಹಯಕರ ಸೇವಾ ಟ್ರಸ್ಟ್ ನಯನಾ ರೈಯವರು ಅಂಗನವಾಡಿಗೆ ಆಗಮಿಸಿದ್ದರು. ಇದೇ ವೇಳೆ ಅಲ್ಲಿಗೆ ಆಗಮಿಸಿದ ಬ್ರಹ್ಮನಗರ ನಿವಾಸಿ ಶೇಖರ್ ಪಿ ಮತ್ತು ಶೇಖರ್ ಎಂಬವರು ಮಾತನಾಡಿ, “ದಲಿತರ ಮಕ್ಕಳ ಮೇಲೆ ಇಲ್ಲಿನ ಸಹಾಯಕಿ ವಿಜಯಲಕ್ಷ್ಮೀಯವರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ಕುರಿತು ಸಹಾಯಕಿಯನ್ನು ಇವತ್ತೆ ವಜಾಗೊಳಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸ್ಥಳೀಯ ನಗರಸಭಾ ಸದಸ್ಯ, “ಈ ಸಮಸ್ಯೆ ಇವತ್ತು ನಿನ್ನೆಯದಲ್ಲ, ಸುಮಾರು ಒಂದು ವರ್ಷದಿಂದ ಇಲ್ಲಿ ಸಮಸ್ಯೆ ಇದೆ. ಈ ಕುರಿತು ಅಂದೇ ನಾವು ಇಲ್ಲಿ ಮೀಟಿಂಗ್ ಮಾಡಿ ಸಿಡಿಪಿಒ ಇಲಾಖೆ ಗಮನಕ್ಕೆ ತಂದಿದ್ದೇವೆ. ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇದು ಇವತ್ತಿನ ತನಕ ಮುಂದುವರಿದಿದೆ” ಎಂದರು.

ಇದಕ್ಕುತ್ತರಿಸಿದ ಸಿಡಿಪಿಒ, “ಯಾವುದಕ್ಕೂ ನಾನು ವಿಚಾರಣೆ ನಡೆಸಲು ಬಂದಿದ್ದೇನೆ. ತಪ್ಪು ಆಗಿದ್ದಲ್ಲಿ ಖಂಡಿತವಾಗಿಯೂ ಅವರನ್ನು ಬೇರೆ ಕಡೆ ಕಳುಹಿಸುವ ಕುರಿತು ನೋಡುತ್ತೇನೆ. ಜೊತೆಗೆ ಮೇಲಧಿಕಾರಿಗೆ ತಿಳಿಸುತ್ತೇನೆ” ಎಂದರು.

ಬ್ರಹ್ಮನಗರ ನಿವಾಸಿಗಳು, “ನಮ್ಮ ಮಕ್ಕಳು ಮಲ ವಿಸರ್ಜನೆ ಮಾಡಿದರೆ ಸರಿಯಾಗಿ ಶುಚಿಗೊಳಿಸುವುದಿಲ್ಲ. ಬದಲಾಗಿ ಸುಮಾರು ಗಂಟೆಗಳ ಕಾಲ ಮಕ್ಕಳನ್ನು ಹೊರಗೆ ನಿಲ್ಲಿಸುತ್ತಾರೆ. ನಾವು ಮಕ್ಕಳ ಕೈಯಲ್ಲಿ ಆಟಿಕೆ ಕೊಟ್ಟರೆ ಅದನ್ನು ಅವರ ಕೈಯಿಂದ ಕಸಿದು ಕೊಂಡು ಆಟ ಆಡಬೇಡಿ ಎಂದು ಬೆದರಿಸುತ್ತಾರೆ. ಜೊತೆಗೆ ನಮ್ಮ ಮಕ್ಕಳನ್ನು ಬರಿ ನೆಲದಲ್ಲಿ ಕೂರಿಸಿ ಉಳಿದ ಮಕ್ಕಳಿಗೆ ಚಾಪೆಯಲ್ಲಿ ಕೂರಿಸುತ್ತಾರೆ. ನಮ್ಮ ಮಕ್ಕಳಿಗೆ ಒಂದೇ ಲೋಟದಲ್ಲಿ ಅರ್ಧ ಹಾಲು ಕುಡಿಯಲು ಕೊಟ್ಟರೆ, ಉಳಿದ ಮಕ್ಕಳಿಗೆ ಬೇರೆ ಬೇರೆ ಲೋಟದಲ್ಲಿ ಒಂದೊಂದು ಲೋಟ ಹಾಲು ಕೊಡುತ್ತಾರೆ. ಸರಕಾರದಿಂದ ಮಕ್ಕಳಿಗಾಗಿ ಕೊಡುವ ಸೌಲಭ್ಯವನ್ನು ಸರಿಯಾಗಿ ಕೊಡುತ್ತಿಲ್ಲ” ಎಂದು ಆರೋಪಿಸಿದರು.