ಕೊನೆಗೂ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡ ಶಾಸಕ ಹಾಲಾಡಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಬಿಜೆಪಿಯಿಂದ ಸಚಿವ ಸ್ಥಾನ ವಂಚಿತರಾಗಿ ಪಕ್ಷದಿಂದ ದೂರವೇ ಉಳಿದು ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷರಾಗುವ ಮೂಲಕ ತಾನು ಬಿಜೆಪಿಯವ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಸೋಲುಣಿಸಿ ಕರಾವಳಿಯ ಭಾಗವಾದ ಕುಂದಾಪುರ ಪ್ರಭಾವವೇ ಹೆಚ್ಚಿದೆ ಎಂಬುದನ್ನು ಸಾಬೀತುಪಡಿಸಿದ್ದರು. ನಂತರದಲ್ಲಿ ಹಾಲಾಡಿ ತನ್ನ ಬೆಂಬಲಿಗರಲ್ಲಿ ಪ್ರಮುಖರನ್ನು ಬಿಜೆಪಿ ಆಯಕಟ್ಟಿನ ಹುದ್ದೆಯಲ್ಲಿ ನೇಮಿಸುವಲ್ಲಿ ಸಫಲರಾಗಿದ್ದರು. ಇದರ ಜೊತೆಗೆ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೂಡಾ ತನ್ನ ಬೆಂಬಲಿಗರಿಗೇ ಬಿಜೆಪಿಯಲ್ಲಿ ಅತೀ ಹೆಚ್ಚಿನ ಸ್ಥಾನ ಗಿಟ್ಟಿಸಿಕೊಳ್ಳುವುದರ ಜೊತೆಗೆ ಬಿಜೆಪಿಯ ರಾಜ್ಯ ನಾಯಕರಿಗೆ ಆಪ್ತರಾಗಿದ್ದರು. ಹಾಲಾಡಿ ಬಿಜೆಪಿ ತೊರೆದಿದ್ದರೂ ಬಿಜೆಪಿ ನಾಯಕರ ಜೊತೆಗೆ ಅನ್ಯೋನ್ಯವಾಗಿರುತ್ತಲೇ ಪಕ್ಷೇತರರಾಗಿಯೇ ಉಳಿದುಕೊಂಡಿದ್ದರು.

ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಬರುತ್ತಾರೆ ಎನ್ನುವ ವದಂತಿಗಳು ಹೊರಬೀಳುತ್ತಲೇ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೂ ಬಿಜೆಪಿಯ ಜತೆ ಹೆಗ್ಡೆಗಿಂತ ಮೊದಲು ಕಮಲ ಪಕ್ಷ ಜತೆ ಗುರುತಿಸಿಕೊಂಡಿದ್ದಾರೆ.