ಶಶಿಕಲಾ ಆಜ್ಞಾಧಾರಕ ಪಳನಿಸಾಮಿಯನ್ನು ಸರಕಾರ ರಚಿಸಲು ರಾಜ್ಯಪಾಲ ಆಹ್ವಾನ

ಚೆನ್ನೈ : ತಮಿಳುನಾಡಿನ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನವಾಗಿ ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಅವರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಈಗಾಗಲೇ ಆಯ್ಕೆಯಾಗಿರುವ ಶಶಿಕಲಾ ಬೆಂಬಲಿಗ ಎಡಪ್ಪಾಡಿ  ಕೆ ಪಳನಿಸಾಮಿಯವರನ್ನು ಸರಕಾರ ರಚಿಸಲು ಆಹ್ವಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಸಂಜೆ ನಡೆಯುವ ಸಾಧ್ಯತೆಯಿದೆ.

ವಿಧಾನಸಭೆಯಲ್ಲಿ ತಮ್ಮ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಪಳನಿಸಾಮಿಗೆ ಮೂರು ದಿನಗಳಿಂದ ಒಂದು ವಾರದ ತನಕ ಅವಕಾಶ ನೀಡಲಿದ್ದಾರೆ. ಬುಧವಾರ ಪಳನಿಸಾಮಿ ರಾಜ್ಯಪಾಲರನ್ನು ಭೇಟಿಯಾಗಿದ್ದ ಸಂದರ್ಭ ನೀಡಿದ್ದ ತನ್ನನ್ನು ಬೆಂಬಲಿಸುವ 124 ಶಾಸಕರ ಸಹಿಗಳಿರುವ ಬೆಂಬಲ ಪತ್ರದಲ್ಲಿರುವ ಸಹಿಗಳನ್ನು ರಾಜ್ಯಪಾಲರ ಕಚೇರಿ ಪರಿಶೀಲಿಸಿದೆ.

ಜಲ್ಲಿಕಟ್ಟು ಮಸೂದೆಯನ್ನು ಅನುಮೋದಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದ ನಂತರ ಅರ್ನಿದಿಷ್ಟ ಮುಂದೂಡಲ್ಪಟ್ಟಿದ್ದ ವಿಧಾನಸಭೆಯ ಅಧಿವೇಶನವನ್ನು ಮತ್ತೆ ಸರಕಾರ ಕರೆಯಬಹುದು.

ಬುಧವಾರ ಸಂಜೆ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿರುವ ಪಳನಿಸಾಮಿ ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿಯಾಗಿ ತಮ್ಮನ್ನು ಸರಕಾರ ರಚಿಸಲು ಆಹ್ವಾನಿಸುವಂತೆ ಕೋರಿದ್ದರು. ಪಳನಿಸಾಮಿ ರಾಜ್ಯಪಾಲರನ್ನು ಭೇಟಿಯಾಗಿದ್ದು ಇದು ಎರಡನೇ ಬಾರಿಯಾಗಿದೆ. ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಿಗ ನಾಯಕರ ತಂಡ ಪಳನಿಸಾಮಿಯನ್ನು ಸರಕಾರ ರಚಿಸಲು ಆಹ್ವಾನಿಸದಂತೆಯೂ ರಾಜ್ಯಪಾಲರನ್ನು ಕೋರಿತ್ತು.

ಆದರೆ ಪಳನಿಸ್ವಾಮಿ ಅವರ ಬೆಂಬಲಕ್ಕೆ ಬಹುಸಂಖ್ಯಾತ ಶಾಸಕರಿರುವುದರಿಂದ ಹಾಗೂ ಪನ್ನೀರ್ ಸೆಲ್ವಂ ಅವರ ಬೆಂಬಲಕ್ಕೆ ಕೆಲವೇ ಕೆಲವು ಶಾಸಕರಿರುವುದರಿಂದ ರಾಜ್ಯಪಾಲರು ಪಳನಿಸಾಮಿಯನ್ನೇ ಸರಕಾರ ರಚಿಸಲು ಆಹ್ವಾನಿಸಿದ್ದಾರೆ.