ಗುರುವಾಯನಕೆರೆ ಕಬಡ್ಡಿ ಪಂದ್ಯಾಟವೋ ಹೊನಲು ಬೆಳಕಿನ ಕಸದ ಪಂದ್ಯಾಟವೋ?

ಸ್ವಚ್ಛತಾ ಆಂದೋಲನಕ್ಕೆ ಕಸಮಯ ಮೈದಾನ ಕೊಡುಗೆ !

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸ್ವಚ್ಛತೆ ಬಗ್ಗೆ ಎಚ್ಚರ ವಹಿಸುವುದು ಸಂಘಟಕರ ಜವಾಬ್ದಾರಿ. ಆದರೆ ಗುರುವಾಯನಕೆರೆ ಸನಿಹದ ಶಕ್ತಿನಗರ ಎಂಬಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಸಂಘಟಕರ ಸ್ವಚ್ಛತಾ ಕಾಳಜಿಗೆ  ಮೈದಾನವನ್ನು ಆವರಿಸಿಕೊಂಡಿರುವ ಕಸದ ರಾಶಿಯೇ ಸಾಕ್ಷಿಯಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂದಿದೆ.

ಈ ಮೈದಾನ ಗುರುವಾಯನಕರೆ  ಸನಿಹದ ಶಕ್ತಿನಗರ ಎಂಬಲ್ಲಿದೆ. ಗುರುವಾಯನಕರೆ ಕಾರ್ಕಳ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ವಿಶಾಲವಾದ ಈ ಶಕ್ತಿ ಕ್ರೀಡಾಂಗಣವು ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳಿಂದ ತುಂಬಿತುಳುಕಾಡುತಿದ್ದು ಸ್ವಚ್ಛ ಭಾರತ ಕಲ್ಪನೆಯನ್ನು ಅಣಕಿಸುವಂತೆ ಕಾಣುತ್ತಿದೆ.

ಪಂದ್ಯಾಟದ ದಿನದವರೆಗೆ ಸಹಜವಾಗಿ ಸ್ವಚ್ಛವಾಗಿದ್ದ ಕ್ರೀಡಾಂಗಣ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಮರುದಿನ ಮೈದಾನವೆಲ್ಲಾ ಕಸಮಯವಾಗಿತ್ತು.  ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಲೀಗ್ ಪಂದ್ಯಾಟದ ನಂತರ ಮೈದಾನ ಪ್ಲಾಸ್ಟಿಕ್‍ಮಯವಾಗಿ ಹೋಗಿದೆ. ಸಂಘಟಕರು ಪಂದ್ಯಾಟ ನಡೆದ ಕೂಡಲೇ ಕ್ರೀಡಾಂಗಣವನ್ನು ಸ್ವಚ್ಛಗೊಳಿಸದೆ ಕಸವನ್ನು ನಿರ್ಲಕ್ಷಿಸಿರುವುದು ಸಂಘಟಕರ ಬೇಜಾವ್ದಾರಿಯನ್ನು ಎತ್ತಿ ತೋರಿಸಿದೆ.

ಕಸಕಡ್ಡಿಯ ರಾಶಿಯಾಗಿರುವ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚು. ಮೈದಾನ ತುಂಬಿಕೊಂಡಿರುವ  ಪ್ಲಾಸ್ಟಿಕ್ ಕಸ ಒಂದೆರಡು ದಿನಗಳಲ್ಲಿ ಗಾಳಿ ಬೀಸಿದರೆ ಅಥವಾ ಮಳೆ ಬಂದರೆ ಸ್ಥಳೀಯವಾಗಿ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ.

ಆದರೆ ಈ ಬಗ್ಗೆ ಸಂಪರ್ಕಿಸಿದ ಸಂಘಟಕರು “ನಾವು ಮೈದಾನವನ್ನು ಸಂಪೂರ್ಣ  ಕ್ಲೀನ್ ಮಾಡಿಯೇ ಬಂದಿದ್ದೇವೆ” ಎಂದಿದ್ದು ಸಂಘಟಕರ ಪ್ರತಿಕ್ರಿಯೆ ನಿಜವೋ ಸುಳ್ಳೋ ಎಂಬುದಕ್ಕೆ ಕಸಮಯ ಮೈದಾನವೇ ಸಾಕ್ಷಿ ಹೇಳಲಿ ಎಂದು ಲೇವಡಿ ಮಾಡುವಂತಾಗಿದೆ.