ಚೋ ನಂತರ `ತುಘಲಕ್’ಗೆ ಗುರುಮೂರ್ತಿ ಸಂಪಾದಕ

ಚೆನ್ನೈ : ಪ್ರಖ್ಯಾತ ಹಾಸ್ಯ ಕಲಾವಿದ ಮತ್ತು ವಿಡಂಬನೆಯ ಸಾಮ್ರಾಟ್ ಎಂದು ಹೆಸರಾಗಿದ್ದ ರಾಜಕೀಯ ವಿಶ್ಲೇಷಕ, ಸಿನಿಮಾ ನಟ, ನಾಟಕ ನಿರ್ದೇಶಕ, ಕಥೆಗಾರ ಮತ್ತು ಪ್ರಸಿದ್ಧ `ತುಘಲಕ್’ ಪತ್ರಿಕೆಯ ಸಂಪಾದಕ ಚೋ ರಾಮಸ್ವಾಮಿ ನಿಧನಾನಂತರದಲ್ಲಿ ಆರೆಸ್ಸೆಸ್ ಚಿಂತಕ ಎಸ್ ಗುರುಮೂರ್ತಿ ಪತ್ರಿಕೆಯ ಸಂಪಾದಕತ್ವ ವಹಿಸಿಕೊಳ್ಳಲಿದ್ದಾರೆ.

ತಮ್ಮ ಟೀಕಾಸ್ತ್ರಗಳಿಂದ ದಿಟ್ಟತನದಿಂದ ರಾಜಕೀಯ ಪಕ್ಷಗಳನ್ನು ಮತ್ತು ನಾಯಕರನ್ನು ಟೀಕಿಸುತ್ತಿದ್ದ ಚೋ ರಾಮಸ್ವಾಮಿ ಹಲವು ದಿನಗಳ ಅಸ್ವಸ್ಥತೆಯ ನಂತರ ಕಳೆದ ಬುಧವಾರ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಚೋರಾಮಸ್ವಾಮಿ ನಾಟಕ ಮತ್ತು ಚಲನಚಿತ್ರಗಳ ಮೂಲಕ ತಮ್ಮ ಛಾಪು ಮೂಡಿಸಿದ್ದರು. ಪತ್ರಿಕೋದ್ಯಮದಲ್ಲಿ ತುಘಲಕ್ ಪತ್ರಿಕೆಯನ್ನು ಮುನ್ನಡೆಸುತ್ತಲೇ ಒಂದು ಬಾರಿ ರಾಜ್ಯಸಭಾ ಸದಸ್ಯರೂ ಆಗಿದ್ದರು.

cho

ಅನೇಕ ರಾಜಕಾರಣಿಗಳಿಗೆ ನಿಕಟವರ್ತಿಯಾಗಿದ್ದ ಚೋ ಇತ್ತೀಚಿನ ದಿನಗಳಲ್ಲಿ ಮೃತ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ನಿಕಟರಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಜಯಲಲಿತಾ ಚೋರಾಮಸ್ವಾಮಿಯವರ ಸಲಹೆ ಪಡೆಯುತ್ತಿದ್ದರು.

1970ರಲ್ಲಿ ಆರಂಭವಾದ ತಮ್ಮ `ತುಘಲಕ್’ ಪತ್ರಿಕೆಯ ಮೂಲಕ ಮಧ್ಯಮ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿದ್ದ ಚೋರಾಮಸ್ವಾಮಿ ತಮ್ಮ ದಿಟ್ಟ ಮತ್ತು ನೇರ ವರದಿಗಳಿಗಾಗಿ ಪ್ರಸಿದ್ಧಿ ಪಡೆದಿದ್ದರು. ಚೋ ನಿಧನದ ನಂತರ ಲೆಕ್ಕ ಪರಿಶೋಧಕ ಮತ್ತು ಆರೆಸ್ಸೆಸ್ ಚಿಂತಕ ಎಸ್ ಗುರುಮೂರ್ತಿ `ತುಘಲಕ್’ ಸಂಪಾದಕರಾಗಿ ಮುಂದುವರೆಯಲಿದ್ದಾರೆ. ಗುರುಮೂರ್ತಿ ಸ್ವದೇಶಿ ಜಾಗ್ರಣ್ ಮಂಚ್ ಸಂಚಾಲಕರೂ ಆಗಿದ್ದಾರೆ.