ಗುರುಪುರ ಶಾಲಾ ಮಕ್ಕಳಲ್ಲಿ ಬಯಲು ಬಹಿರ್ದೆಸೆ ಜಾಗೃತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಗುರುಪುರ ಸರ್ಕಾರಿ ಹೈಸ್ಕೂಲಿನಲ್ಲಿ `ಬಯಲು ಬಹಿರ್ದೆಸೆಯಿಂದ ಮುಕ್ತ ಸ್ವಾತಂತ್ರ್ಯ ಸಪ್ತಾಹ’ ಆಯೋಜಿಸಲಾಯಿತು. ಗ್ರಾ ಪಂ ಪಿಡಿಒ ಅಬೂಬಕ್ಕರ್ ಈ ಕಾರ್ಯಕ್ರಮ ನಿರ್ವಹಿಸಿದರು.

ಸ್ವಚ್ಛ ಭಾರತ ಆಂದೋಲನದ ಕಲ್ಪನೆಯಡಿಯಲ್ಲೇ `ಸ್ವಚ್ಛ ಗ್ರಾಮ’ಕ್ಕಾಗಿ ಪಂಚಾಯತ್ ಎಲ್ಲ ದೃಷ್ಟಿಯಿಂದಲೂ ಅಗತ್ಯವೆನ್ನಲಾದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ತಮ್ಮ ಸುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವ ದೃಷ್ಟಿಯಲ್ಲಿ ಗ್ರಾಮವಾಸಿಗರಿಗೆ ಅರಿವು ಮೂಡಿಸುವ ವಿಶಿಷ್ಟ ಸಪ್ತಾಹವಾಗಿದೆ. ಶಾಲಾ ವಿದ್ಯಾರ್ಥಿಗಳಿಂದ ಇದು ಸಾಧ್ಯವೆಂಬ ನೆಲೆಯಲ್ಲಿ ಶಾಲಾ ಮಟ್ಟದಿಂದಲೇ ಸಪ್ತಾಹ ಆರಂಭಿಸಲಾಗಿದೆ ಎಂದು ಅಬೂಬಕ್ಕರ್ ಅಭಿಪ್ರಾಯಪಟ್ಟರು. ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿದರು.

ಈ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿ, ತ್ಯಾಜ್ಯದ ಹಾವಳಿ, ರೋಗರುಜಿನಗಳಿಗೆ ಕಾರಣವಾಗುವ ಕಸಕಡ್ಡಿಗಳು ಅನಧಿಕೃತ ಸಂಗ್ರಹ, ತ್ಯಾಜ್ಯ ಪುನರ್ಬಳಕೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸಲಾಯಿತು.

ಇದೇ ವೇಳೆ `ಸ್ವಚ್ಛ ಗ್ರಾಮ’ಕ್ಕೆ ಶಕ್ತಿ ತುಂಬುವ ಉದ್ದೇಶಕ್ಕಾಗಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಗ್ರಾ ಪಂ ಸಿಬ್ಬಂದಿ ವರ್ಗ ಹಾಗೂ ಇತರರು ಸೇರಿ `ಮಾನವ ಸರಪಳಿ’ ನಿರ್ಮಿಸಲಾಯಿತು.