ವಿದೇಶದಿಂದ ಬಂದ ಯುವಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಹತ್ತು ದಿನಗಳ ಹಿಂದೆ ವಿದೇಶದಿಂದ ಬಂದ ಯುವಕನೊಬ್ಬ ನೆರೆಮೆನಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೈಲಬೆಟ್ಟು ಮರ್ದ ಪೂಜಾರಿ ಎಂಬವರ ಪುತ್ರ ಲೋಕೇಶ್ (29) ಮೃತ ಯುವಕ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈತ ರಜೆ ಹಿನ್ನೆಲೆಯಲ್ಲಿ ಹತ್ತು ದಿನಗಳ ಹಿಂದೆ ಊರಿಗೆ ಬಂದಿದ್ದ. ಊರಲ್ಲಿ ಕೆಲವು ದಿನಗಳಿಂದ ಈತ ಮಂಕಾಗಿದ್ದು, ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಾಗೂ ಬಂಗಾರವನ್ನು ಸಂಬಂಧಿಕರಿಗೆ ನೀಡಿದ್ದ ಎನ್ನಲಾಗಿದೆ.

ಗುರುವಾರ ರಾತ್ರಿ ಸುಮಾರು 11 ಗಂಟೆಯವರೆಗೆ ಮನೆಯಲ್ಲೆ ಇದ್ದು ಬಳಿಕ ಕಾಣೆಯಾಗಿದ್ದ. ಈತ ಕಾಣೆಯಾದ ವಿಷಯ ಮರುದಿನ ಬೆಳಿಗ್ಗೆ ಗೊತ್ತಾಗಿ ಸ್ಥಳೀಯರು ಹುಡುಕಾಡಲಾರಂಭಿಸಿದಾಗ ಶನಿವಾರ ಬೆಳಿಗ್ಗೆ ನೆರೆಮನೆಯ ಶಾರದಾ ಎಂಬವರ ಬಾವಿಯಲ್ಲಿ ಶವ ಪತ್ತೆಯಾಗಿದೆ.  ಲೋಕೇಶ್ ಅವರ ತಂದೆ ಮಾನಸಿಕವಾಗಿ ದುರ್ಬಲರಾಗಿದ್ದು, ಇದೇ ಕಾರಣಕ್ಕಾಗಿ ಮಗನಿಗೆ ಕಿರಿಕಿರಿ ಉಂಟುಮಾಡುತ್ತಿದ್ದರೆನ್ನಲಾಗಿದೆ. ಇದರಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಹೇಳಲಾಗುತ್ತಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮರ್ದ ಪೂಜಾರಿಯ ನಾಲ್ವರು ಮಕ್ಕಳಲ್ಲಿ ಮೂವರು ಮಕ್ಕಳಿಗೆ ಮದುವೆಯಾಗಿ ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಘಟನೆ ದಿನ ಮನೆಯಲ್ಲಿ ಲೋಕೇಶ್ ಮತ್ತು ಆತನ ತಂದೆ ಮಾತ್ರ ಇದ್ದರೆನ್ನಲಾಗಿದೆ.