ಕೊಲ್ಲಿ ಪೊಲೀಸರಿಂದ ಭಾರತೀಯರ ವೀಸಾ ಪರಿಶೀಲನೆ

ನಿತಾಕತ್ ಕಾಯ್ದೆಯಿಂದ ಕಂಗೆಟ್ಟ ಕರಾವಳಿಗರು   ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ವಾಪಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೈ ತುಂಬಾ ಸಂಬಳದ ಉದ್ಯೋಗವನ್ನು ಅರಸಿಕೊಂಡು ದೂರದ ದುಬೈ, ಸೌದಿ, ಮಸ್ಕತ್ತಿಗೆ ತೆರಳಿದವರು ಇದೀಗ ಕಂಗಾಲಾಗಿದ್ದಾರೆ. ಕರಾವಳಿಗರಿಗೆ ಗಲ್ಫ್ ರಾಷ್ಟ್ರಗಳು ಹಣದ ಖಜಾನೆಯಾಗಿತ್ತು. ಆದ್ರೆ ಇದೀಗ ಉದ್ಯೋಗ ಕಳೆದುಕೊಳ್ಳುವ ಭೀತಿ ಅಲ್ಲಿನ ಭಾರತೀಯರನ್ನು ಕಾಡುತ್ತಿದೆ. ಈಗಾಗಲೇ ಸಾವಿರಾರು ಮಂದಿ ಊರಿಗೆ ಮರಳಿದ್ದು, ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಕರ್ನಾಟಕದ ಏಳೆಂಟು ಲಕ್ಷ ಮಂದಿ ಇದ್ದು ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಮಂದಿ ಅತ್ಯಧಿಕವಾಗಿದ್ದಾರೆ. ಕರಾವಳಿ, ಮಲೆನಾಡಿನ ಯುವಜನರು ಉದ್ಯೋಗಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಅರಬ್ ರಾಷ್ಟ್ರಗಳನ್ನು ಅವಲಂಬಿಸಿದ್ದಾರೆ.

ಮೂರು ವರ್ಷಗಳ ಹಿಂದೆ ನಿತಾಕತ್ ಎಂಬ ಕಾಯ್ದೆಯ ಮೂಲಕ ವೀಸಾ ನಿಯಮಗಳನ್ನು ಕಠಿಣಗೊಳಿಸಿದ್ದ ಸೌದಿ ದೇಶ ಈಗ ಚಿನ್ನದಂಗಡಿ, ಮೊಬೈಲ್ ಶಾಪ್, ಇಲೆಕ್ಟ್ರಾನಿಕ್, ಇಲೆಕ್ಟ್ರಿಕಲ್ ವಸ್ತುಗಳ ಮಳಿಗೆ, ಕನ್ನಡಕ, ವೈದ್ಯಕೀಯ ಸಲಕರಣೆ, ಬಟ್ಟೆ ಮಳಿಗೆಗಳು, ಕಾರು, ಬಿಡಿಭಾಗಗಳ ಮಾರಾಟ ಸಹಿತ ಸುಮಾರು 12 ವಿಭಾಗಗಳಲ್ಲಿ ತನ್ನ ದೇಶದ ಪ್ರಜೆಗಳಷ್ಟೆ ಇರಬೇಕು ಎಂದು ಆದೇಶಿಸಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಇಂತಹ ಕೆಲಸಗಳಲ್ಲಿ ಭಾರತೀಯರೇ ತೊಡಗಿಸಿಕೊಂಡಿದ್ದಾರೆ.

ಸೌದಿ ಅರೇಬಿಯಾದ ಈ ನೀತಿಯಿಂದಾಗಿ ಲಕ್ಷಾಂತರ ಭಾರತೀಯರು ಮರಳಿ ಊರು ಸೇರುತ್ತಿದ್ದಾರೆ. ಇನ್ನು ಕೆಲವರಿಗೆ ದುಡಿದ ಸಂಬಳವೂ ಸಿಗದೇ ಕಂಗಾಲಾಗಿದ್ದಾರೆ. ಉದ್ಯೋಗ ಕಳೆದುಕೊಂಡು ಹಿಂದಿರುಗುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಸೌದಿ ಅರೇಬಿಯಾಕ್ಕೆ ತೆರಳಿ ಉತ್ತಮ ಉದ್ಯೋಗದ ಕನಸು ಕಾಣುತ್ತಿದ್ದ ಯುವಜನತೆ ಕೂಡಾ ನಿರುದ್ಯೋಗದ ಭೀತಿಯಿಂದ ಹತಾಶರಾಗಿದ್ದಾರೆ.

“ಕೇರಳ ಸರಕಾರ ಉದ್ಯೋಗ ಕಳೆದುಕೊಂಡು ಹಿಂದಿರುಗುತ್ತಿರುವವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ. ಸ್ಥಳೀಯವಾಗಿ ಸ್ವ-ಉದ್ಯೋಗ, ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗಿ ಯೋಜನೆಗಳನ್ನು, ಸಾಲ ಸೌಲಭ್ಯಗಳನ್ನು ರೂಪಿಸುತ್ತಿದೆ. ಹಲವು ಪ್ಯಾಕೇಜ್ ಕೂಡಾ ಘೋಷಿಸಿದೆ. ಅರಬ್ ದೇಶದ ಸರಕಾರಗಳೊಂದಿಗೆ ಮಾತುಕತೆಗೆ ಪ್ರತಿನಿಧಿಗಳನ್ನೂ ಕಳುಹಿಸಿಕೊಟ್ಟಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಏನೂ ಮಾಡದೇ ಮೌನವಾಗಿದೆ” ಎನ್ನುತ್ತಾರೆ ಕತಾರ್.ನಿಂದ ಮರಳಿದ ಕಾಟಿಪಳ್ಳದ ಮಹಮ್ಮದ್.

 

 

LEAVE A REPLY