ಗುಜರಾತ : ಜಾತಿ ಸಮೀಕರಣ ಮೀರುತ್ತಿರುವ ವರ್ಗ ಪ್ರಜ್ಞೆ

ಜಿಗ್ನೇಶ್ ಮೆವಾನಿ

ಗುಜರಾತದಲ್ಲಿ ಪಟೇಲ್, ಒಬಿಸಿ ಮತ್ತು ದಲಿತ ಸಮುದಾಯಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಿದ್ದು ಈ ಗುಂಪುಗಳ ನಡುವಿನ ಜಾತಿ ವೈಷಮ್ಯಗಳು ಕಡಿಮೆಯಾಗಿವೆ.

  • ಮನು ರೆಮಕಾಂತ್

ಮೂರು ವಿಭಿನ್ನ ಜಾತಿ ಗುಂಪಿಗೆ ಸೇರಿದ ಮತ್ತು ಜಾತಿ ಹಿತಾಸಕ್ತಿಯನ್ನು ಪ್ರತಿನಿಧಿಸುವ ಮೂವರು ನಾಯಕರು ಗುಜರಾತದಲ್ಲಿ ಒಂದಾಗಿದ್ದಾರೆ. ದೇಶದ್ರೋಹದ ಆರೋಪ ಎದುರಿಸುತ್ತಿರುವ ಹಾರ್ದಿಕ್ ಪಟೇಲ್ ಆರು ತಿಂಗಳ ಗಡೀಪಾರು ಶಿಕ್ಷೆಯನ್ನು ಪೂರೈಸಿ ರಾಜ್ಯಕ್ಕೆ ಮರಳುತ್ತಿದ್ದಾರೆ. ದಲಿತ ಕಾರ್ಯಕರ್ತ ಜಿಗ್ನೇóಶ್ ಮೆವಾನಿ ಊನಾ ಘಟನೆಯ ನಂತರ ಒಬ್ಬ ಜನಾಂದೋಲನ ನಾಯಕರಾಗಿ ಹೊರಹೊಮ್ಮಿದ್ದಾರೆ. ಮತ್ತೊಂದೆಡೆ ಗುಜರಾತ್ ಕ್ಷತ್ರಿಯ ಥಾಕುರ್ ಸೇನೆಯ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಥಾಕೂರ್ ಇದ್ದಾರೆ. ಈ ಮೂವರೂ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದು ರಾಜ್ಯ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಭೂಮಿ ಸಂಬಂಧಿತ ಮಸೂದೆಯನ್ನು ವಿರೋಧಿಸಿ ಹೋರಾಡಲು ನಿರ್ಧರಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಪುನರ್ವಸತಿ ಮತ್ತು ಪುನರುಜ್ಜೀವನ (ಗುಜರಾತ್ ತಿದ್ದುಪಡಿ) ಕಾಯ್ದೆ 2016ಕ್ಕೆ ಕಳೆದ ಬಜೆಟ್ ಅಧಿವೇಶನದ ಕಡೆಯ ದಿನದಂದು ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಯುಪಿಎ ಸರ್ಕಾರ 2013ರಲ್ಲಿ ಜಾರಿಗೊಳಿಸಿದ್ದ ಭೂ ಸ್ವಾಧೀನ ಪುನರುಜ್ಜೀವನ ಮತ್ತು ಪುನರ್ವಸತಿ  ಕಾಯ್ದೆಯನ್ನು ತಿದ್ದುಪಡಿ ಮಾಡಿ ಎನ್ ಡಿ ಎ ಸರ್ಕಾರ ಜಾರಿಗೊಳಿಸಿದ ಭೂಸ್ವಾಧೀನ ಕಾಯ್ದೆಯನ್ನು ಹೋಲುವಂತಹ ನಿಯಮಗಳು ಗುಜರಾತ್ ಕಾಯ್ದೆಯಲ್ಲೂ ಇರುವುದು ಈ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.  ಕೇಂದ್ರ ಸರ್ಕಾರದ 2014ರ ಕಾಯ್ದೆಯಲ್ಲಿ ಹಿಂದಿನ ಕಾಯ್ದೆಯ ಹಲವು ಮುಖ್ಯ ಅಂಶಗಳನ್ನು ಕೈಬಿಡಲಾಗಿತ್ತು. ಸಾಮಾಜಿಕ ಪರಿಣಾಮದ ನಿಯಮವನ್ನು ಸಡಿಲಗೊಳಿಸಲಾಗಿತ್ತು. ಖಾಸಗಿ ಉದ್ದಿಮೆಗಳು ಭೂ ಸ್ವಾಧೀನ ಮಾಡಿಕೊಳ್ಳುವಾಗ ಶೇ 80ರಷ್ಟು ಸ್ಥಳಿಯ ಜನರ ಸಮ್ಮತಿ ಪಡೆಯುವ ಮತ್ತು ಸರ್ಕಾರಿ ಭೂ ಸ್ವಾಧೀನಕ್ಕೆ ಶೇ 70ರಷ್ಟು ಜನರ ಸಮ್ಮತಿ ಪಡೆಯುವ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು.

ರಾಷ್ಟ್ರೀಯ ಸುರಕ್ಷತೆ, ವಿದ್ಯುತ್ ಘಟಕಗಳು ಮತ್ತು ಮೂಲ ಸೌಕರ್ಯಗಳ ಘಟಕಗಳಿಗೆ ಪರವಾನಗಿ ನೀಡುವಾಗ ಸಾಮಾಜಿಕ ಪರಿಣಾಮದ ಮಾನದಂಡ ಇರಕೂಡದು ಎಂದು ಗುಜರಾತ್ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರದ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲೂ ಇದೇ ನಿಯಮ ಅನ್ವಯಿಸುತ್ತದೆ. ಮುಂಬಯಿ ದೆಹಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕಾಗಿ ಗುಜರಾತ್ ಸರ್ಕಾರ 1500 ಕಿಲೋಮೀಟರ್ ವಿಸ್ತೀರ್ಣದಲ್ಲಿ 900 ಚದರ ಕಿಲೋಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಭೂಮಿಯ ಒಡೆತನ ಹೊಂದಿರುವ ಪಟೇಲ್, ಥಾಕುರ್ ಮತ್ತು ಕ್ಷತ್ರಿಯ ಸಮುದಾಯದ ನಾಯಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1960ರಲ್ಲಿ ಗುಜರಾತ್ ವಿಧಾನಸಭೆಯಲ್ಲಿ ಅಂಗೀಕಾರವಾದ ಕೃಷಿ ಭೂಸ್ವಾಧೀನ ಕಾಯ್ದೆಯನ್ವಯ ಬಡವರಿಗೆ ಭೂಮಿಯನ್ನು ಹಂಚಲು ನಿರ್ಧರಿಸಲಾಗಿತ್ತು. ಆದರೆ ಈ ಕಾಯ್ದೆ ಜಾರಿಯಾದ ನಂತರವೂ 55 ಲಕ್ಷ ಭೂಹೀನರಿಗೆ ಭೂಮಿ ಪರಭಾರೆ ಮಾಡಲಾಗಿಲ್ಲ ಈಗ ಈ ಭೂಮಿಯನ್ನು ಕೈಗಾರಿಕೆಗಳಿಗೆ ಹಸ್ತಾಂತರಿಸಲು ಸರ್ಕಾರ ಸಿದ್ಧವಾಗಿದೆ.

ಸರ್ಕಾರದ ಮಸೂದೆಯನ್ನು ಈ ನಾಯಕರು ವಿರೋಧಿಸಲು ನಾಲ್ಕು ಕಾರಣಗಳಿವೆ. ಮೊದಲನೆಯದಾಗಿ ಗುಜರಾತದನಲ್ಲಿ ನಗರೀಕರಣ ಮತ್ತು ಔದ್ಯಮೀಕರಣ ಭರದಿಂದ ಸಾಗುತ್ತಿರುವುದರಿಂದ ಭೂಮಿಯ ವ್ಯವಹಾರದಲ್ಲಿ ಪೈಪೋಟಿ ಹೆಚ್ಚಾಗಿದೆ. 2001-11ರ ದಶಕದಲ್ಲಿ ನಗರವಾಸಿಗಳ ಸಂಖ್ಯೆ ಶೇ 37ರಿಂದ ಶೇ 43ಕ್ಕೆ ಏರಿದೆ. ನರ್ಮದಾ ಅಣೆಕಟ್ಟು ನಿರ್ಮಾಣದಿಂದ ನೀರಾವರಿ ಸೌಲಭ್ಯ ದೊರೆತಿರುವುದೂ ಇದಕ್ಕೆ ಕಾರಣವಿರಬಹುದು. ಆದರೆ ಈ ಅಣೆಕಟ್ಟು ನಿರ್ಮಾಣದ ನಂತರ ರೈತರು ಭೂಮಿಯ ಮೇಲಿನ ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ.

ಎರಡನೆಯದಾಗಿ ಗ್ರಾಮೀಣ ಜನತೆ ಮತ್ತು ನಗರವಾಸಿಗಳ ಜೀವನ ಮಟ್ಟದಲ್ಲಿ ಸುಧಾರಣೆಯಾಗಿದೆ. 1990ರವರೆಗೂ ಗ್ರಾಮೀಣ ಜನತೆಯ ಬದುಕು ಉತ್ತಮವಾಗಿತ್ತು. ಆದರೆ 2010ರಲ್ಲಿ ದಾರಿದ್ರ್ಯ ರೇಖೆಯ ಕೆಳಗಿನ ಗ್ರಾಮೀಣ ಜನತೆಯ ಸಂಖ್ಯೆ ಶೇ27ರಷ್ಟಾಗಿತ್ತು. ಮತ್ತೊಂದೆಡೆ ನಗರ ಪ್ರದೇಶದ ಬಡವರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು. ಹಾಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡಜನತೆಯ ನಡುವಿನ ಕಂದರ ಹೆಚ್ಚಾಗುತ್ತಲೇ ಹೋಗಿತ್ತು. ಮೂರನೆಯದಾಗಿ ನಗರ ಪ್ರದೇಶಗಳಿಗೆ ವಲಸೆ ಬಂದ ಕಾರ್ಮಿಕರಿಗೆ ಸೂಕ್ತ ನೌಕರಿ ಒದಗಿಸಲಾಗಿಲ್ಲ. ಕಾರಣ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಏಕೆಂದರೆ ರಾಜ್ಯ ಸರ್ಕಾರ ಬೃಹತ್ ಕೈಗಾರಿಕಾ ಘಟಕಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.

ಕಡೆಯದಾಗಿ ಕಳೆದ ಹಲವು ವರ್ಷಗಳ ಸಿಎಜಿ ವರದಿಯಲ್ಲಿ ಹೇಳಿರುವಂತೆ ಬೃಹತ್ ಉದ್ದಿಮೆಗಳು ಭೂಮಿಯನ್ನು ಅಗ್ಗದ ದರದಲ್ಲಿ ಖರೀದಿಸಿವೆ.  ಎಲ್ ಅಂಡ್ ಟಿ ಕಂಪನಿಗೆ 8 ಲಕ್ಷ ಚದರ ಮೀಟರ್ ಅದಾನಿ ಬಂದರಿಗೆ 3585 ಹೆಕ್ಟೇರ್ ಭೂಮಿಯನ್ನು ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಪಟೇಲ್, ಒಬಿಸಿ ಮತ್ತು ದಲಿತ ಸಮುದಾಯಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಿದ್ದು ಈ ಗುಂಪುಗಳ ನಡುವಿನ ಜಾತಿ ವೈಷಮ್ಯಗಳು ಕಡಿಮೆಯಾಗಿವೆ.