ಕಾಲೇಜು ಅತಿಥಿ ಉಪನ್ಯಾಸಕರಿಗೆ ಎಂಟು ತಿಂಗಳಿಂದ ವೇತನ ಬಾಕಿ

ಬೆಂಗಳೂರು : ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ 14,000ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ಕಳೆದ ಎಂಟು ತಿಂಗಳಿಂದ ವೇತನ ಪಾವತಿಸಿಲ್ಲ.
ಅತಿಥಿ ಉಪನ್ಯಾಸಕರಿಗೆ ಸರ್ಕಾರ ಮೂರು ತಿಂಗಳಿಗೊಮ್ಮೆ ವೇತನ ಜಾರಿ ಮಾಡುತ್ತಿದ್ದರೂ, ಕೆಲವರಿಗೆ 2016 ಜೂನಿನಿಂದ ವೇತನ ಬಂದಿಲ್ಲ.
“ಈಗ ಪರೀಕ್ಷೆ ಮುಗಿದು, ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿದಿದೆ. ಆದರೆ ವೇತನ ಇನ್ನೂ ಕೈಸೇರಿಲ್ಲ. ವೇತನದ ಬಗ್ಗೆ ವಿಚಾರಿಸಿದಾಗ, ಪ್ರಾಂಶುಪಾಲರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಪ್ರಾಂಶುಪಾಲರಲ್ಲಿ ಕೇಳಿದರೆ ಹಣ ಬಂದಿಲ್ಲ ಎನ್ನುತ್ತಿದ್ದಾರೆ” ಎಂದು ನಗರದ ಸರ್ಕಾರಿ ಕಾಲೇಜೊಂದರ ಅತಿಥಿ ಉಪನ್ಯಾಸಕರೊಬ್ಬರು ತಿಳಿಸಿದರು.
ರಾಜ್ಯದ ಬಹುತೇಕ ಸರ್ಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನು ಅವಲಂಬಿಸಿವೆ.
“ರಾಜ್ಯದ ಯಾವುದೇ ಕಾಲೇಜು ನೋಡಿದರೂ ನೀವಲ್ಲಿ ಖಾಯಂ ಉಪನ್ಯಾಸಕರಿಗಿಂತ ಹೆಚ್ಚು ಅತಿಥಿ ಉಪನ್ಯಾಸಕರನ್ನು ನೋಡಬಹುದು. ಕೆಲವು ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ಸಂಚಾಲಿಸುತ್ತಿವೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಅಸೋಸಿಯೇಶನಿನ ಅಧ್ಯಕ್ಷ ಶ್ರೀನಿವಾಚಾರ್ ಹೇಳಿದರು. “ಶಿಕ್ಷಕರ ಶೈಕಣಿಕ ಅವಧಿ ಮುಗಿಯುತ್ತ ಬಂದಿದ್ದರೂ ಸರ್ಕಾರ ಅತಿಥಿ ಉಪನ್ಯಾಸಕರ ವೇತನ ನೀಡಲು ಮೀನಮೇಷ ಎಣಿಸುತ್ತಿದೆ” ಎಂದವರು ದೂರಿದರು.