ಜಿಎಸ್ಟಿ ಕಡಿತದ ನಂತರವೂ ಹೋಟೆಲ್ ತಿಂಡಿ-ತೀರ್ಥ ದರ ಇಳಿಕೆ ಕಾಣುತ್ತಿಲ್ಲ

ಜಿಎಸ್ಟಿ ದರಗಳು ಕಡಿಮೆಯಾಯಿತೆಂದ ಮಾತ್ರಕ್ಕೆ ತಿಂಡಿ-ತೀರ್ಥಗಳ ದರ ಹೇಗೆ  ಇಳಿಸಲು ಸಾಧ್ಯ?” ಎಂದು ಹೋಟೆಲ್ ಮಾಲಕರೊಬ್ಬರು ಪ್ರಶ್ನಿಸುತ್ತಾರೆ.

ಬೆಂಗಳೂರು : ಹೋಟೆಲುಗಳ ಮೇಲೆ ವಿಧಿಸಲಾಗಿದ್ದ ಶೇ 12 ಹಾಗೂ ಶೇ 18 ಜಿಎಸ್ಟಿ ದರಗಳನ್ನು ಶೇ 5ಕ್ಕೆ ಇಳಿಸಲಾಗಿರುವ ಹೊರತಾಗಿಯೂ  ಜಿಎಸ್ಟಿ ಜಾರಿಯ ನಂತರ  ತಮ್ಮ ತಿಂಡಿ ದರಗಳನ್ನು ಏರಿಸಿದ್ದ ಹೋಟೆಲುಗಳು ಮತ್ತೆ ಹಿಂದಿನ ದರವನ್ನೇ ವಿಧಿಸಲು ಆರಂಭಿಸಿಲ್ಲ. ದರ ಇಳಿಕೆಯ ಸಂಭಾವ್ಯತೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಹೀಗಾದಲ್ಲಿ ಸರಕಾರ ಹೋಟೆಲುಗಳ ಮೇಲೆ ವಿಧಿಸಲಾಗಿದ್ದ ಜಿಎಸ್ಟಿ ಕಡಿತಗೊಳಿಸಿದ ಹೊರತಾಗಿಯೂ ಅದರ ಲಾಭ ಗ್ರಾಹಕನಿಗಿಲ್ಲದಂತಾಗುತ್ತದೆ.

ಸರಕಾರ ಜಿಎಸ್ಟಿ ಜಾರಿಗೊಳಿಸಿದ ನಂತರ ಹೆಚ್ಚಿನ ದೊಡ್ಡ ರೆಸ್ಟಾರೆಂಟುಗಳು ತಮ್ಮ  ತಿಂಡಿ ದರಗಳಲ್ಲಿ ಬದಲಾವಣೆ ತರದೆ ಜಿಎಸ್ಟಿ ದರವನ್ನು ಪ್ರತ್ಯೇಕವಾಗಿ ಬಿಲ್ಲಿನಲ್ಲಿ ನಮೂದಿಸುತ್ತಿದ್ದರೆ ಸಣ್ಣ ರೆಸ್ಟಾರೆಂಟುಗಳು ತಮ್ಮ ದರವನ್ನೇ ಏರಿಸಿಬಿಟ್ಟಿದ್ದವು.

“ಹೋಟೆಲ್ ಮಾಲಕರು ಕೇವಲ ಜಿಎಸ್ಟಿ ಮಾತ್ರವಲ್ಲದೆ ಬೇರೆಲ್ಲಾ ಅಂಶಗಳನ್ನು ಪರಿಗಣಿಸಿಯೇ ದರ ಏರಿಸುತ್ತಾರೆ. ಹೀಗಿರುವಾಗ ಈಗ ಮತ್ತೆ ದರ ಇಳಿಸುವುದು ಅವರವರ ವಿವೇಚನೆ ಬಿಟ್ಟ ವಿಚಾರ” ಎಂದು  ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ವಾಸುದೇವ ಅಡಿಗ ಹೇಳುತ್ತಾರೆ.

ಜಿಎಸ್ಟಿ ದರವನ್ನು ಬಿಲ್ಲಿನಲ್ಲಿ ಪ್ರತ್ಯೇಕವಾಗಿ ಸೂಚಿಸುತ್ತಿದ್ದ ಹೋಟೆಲುಗಳಲ್ಲಿ ದರಗಳು ಇಳಿಯಲಿವೆ. “ಆದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹಿಂದಕ್ಕೆ ಪಡೆಯಲಾಗುವುದರಿಂದ ಹೊಟೇಲಿಗರು ಸಮಸ್ಯೆ ಗೀಡಾಗಲಿದ್ದಾರೆ. ಈ  ನಿಟ್ಟಿನಲ್ಲಿ ಅವರಿಗಾಗುವ ವೆಚ್ಚವನ್ನೂ ಸರಿದೂಗಿಸಬೇಕಿರುವುದರಿಂದ ಜಿಎಸ್ಟಿ ದರಗಳು ಕಡಿಮೆಯಾಯಿತೆಂದ ಮಾತ್ರಕ್ಕೆ ದರಗಳನ್ನು  ಹೇಗೆ  ಇಳಿಸಲು ಸಾಧ್ಯ?” ಎಂದು ಹೋಟೆಲ್ ಮಾಲಕರೊಬ್ಬರು ಪ್ರಶ್ನಿಸುತ್ತಾರೆ.