ಶೀಘ್ರದಲ್ಲೇ ಜನರ ಮನಗೆದ್ದ ಗೃಹ ಸುರಕ್ಷಾ ಆ್ಯಪ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಾಲಕರಿಲ್ಲದ ಮನೆಯನ್ನು ದರೋಡೆಕೋರರ ಕಾಟದಿಂದ ಮುಕ್ತಗೊಳಿಸುವ ಗೃಹ ಸುರಕ್ಷಾ ವಾಟ್ಸಪ್ ಆಧರಿತ ಸುರಕ್ಷತಾ ಯೋಜನೆ ಜಾರಿಯಾದ ತಿಂಗಳೊಳಗೆ ಭಾರೀ ಜನರ ಮನಸ್ಸನ್ನು ಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಮಂಗಳೂರು ನಗರ ಪೊಲೀಸರ ಸಹಾಯದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಯೋಜನೆಗೆ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಗಿಂತ ಹೊರಗಿನ ಜನರಿಂದಲೇ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿರುವುದು ಕಂಡುಬಂದಿದೆ.

ಕುತೂಹಲಕಾರಿ ಸಂಗತಿಯೆಂದರೆ ಈ ಸುರಕ್ಷತಾ ಪರಿಹಾರ ಯೋಜನೆಯು ಅತಿ ಶೀಘ್ರದಲ್ಲಿ ದೇಶದ ಮೂಲೆ ಮೂಲೆಗೆ ತಲುಪಿದೆ.

ಗೃಹ ಸುರಕ್ಷಾ ಯೋಜನೆ ಅಡಿಯಲ್ಲಿ ಡಿಸೆಂಬರ್ 21ರಂದು ಸುಮಾರು 125 ಜನರು ತಮ್ಮ ಮನೆಗಳನ್ನು ಪೊಲೀಸರ ಸುಪರ್ದಿಯಲ್ಲಿ ಬಿಟ್ಟುಹೋಗಿರುವುದು ಅಧಿಕೃತವಾಗಿ ತಿಳಿದುಬಂದಿದೆ. ಪೊಲೀಸರು ಗೊತ್ತುಪಡಿಸಿರುವ 9480805300 ವಾಟ್ಸಪ್ ನಂಬರಿಗೆ ತಮ್ಮ ಮನೆಗಳ ಮಾಹಿತಿ ನೀಡಿ ರಜಾದಿನಗಳಲ್ಲಿ ತಮ್ಮ ಊರುಗಳಿಗೆ ತೆರಳಿದ್ದಾರೆ.

ಇದೇ ವೇಳೆ ಸುಮಾರು 9 ಮಂದಿ ಕರ್ನಾಟಕದ ಹೊರಭಾಗದ ನಿವಾಸಿಗಳು ತಮ್ಮ ಮನೆಗಳ ಮಾಹಿತಿ ನೀಡಿದ್ದಾರೆ ಹಾಗೂ ಒಬ್ಬರು ಜಿಲ್ಲೆಯ ಹೊರಗಿನವರು. 25 ಮಂದಿ ಜಿಲ್ಲೆಯವರೇ ಆಗಿದ್ದು, ಬರೋಬ್ಬರಿ 52 ಮಂದಿ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯವರಾಗಿದ್ದಾರೆ. 38 ಬಳಕೆದಾರರು ಈ ನಂಬರನ್ನು ವಿದೇಶದಿಂದ ಬಳಸಿದ್ದಾರೆ ಎಂದು ದಕ್ಷಿಣ ಕನ್ನಡ ಪೊಲೀಸ್ ಸುಪರಿಂಟೆಂಡೆಂಟ್ ಗುಲಾಬ್ ರಾವ್ ಬೊರಸೆ ಹೇಳಿದ್ದಾರೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಹೆಚ್ಚಿನ ಜನರು ಈ ನಂಬರನ್ನು ಪರೀಕ್ಷಿಸಲೆಂದು ಬಳಸಿದ್ದಾರೆ. ಈ ನಂಬರ್ ಕಾರ್ಯನಿರ್ವಹಣೆಯಲ್ಲಿದೆಯೇ ಎಂಬುದು ಅವರ ಕುತೂಹಲವಾಗಿತ್ತು.

ಗೃಹ ಸುರಕ್ಷಾದಡಿಯಲ್ಲಿ ಸುರಕ್ಷತೆಗೊಳಪಟ್ಟ ಹೆಚ್ಚಿನ ಮಂದಿ ರಜೆಯಿಂದ ಹಿಂತಿರುಗಿದ್ದಾರೆ. ಆದರೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 8 ಮಂದಿ ಮನೆಗೆ ಬೀಗ ಹಾಕಿ ತೆರಳಿದ್ದು, ಪೊಲೀಸರ ನಿಕಟ ಸಂಪರ್ಕದಲ್ಲಿದ್ದರು. ಐದು ಮಂದಿ ಹಿಂತಿರುಗಿದ್ದಾರೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೆಳ್ತಂಗಡಿಯ ಒಬ್ಬ ವ್ಯಕ್ತಿ ಇನ್ನೂ ಮನೆಗೆ ಹಿಂತಿರುಗಿಲ್ಲ. ಈ ಮನೆಗಳ ಮೇಲೆ ಪೊಲೀಸರು ವಿಶೇಷ ದೃಷ್ಟಿಯಿಟ್ಟಿರುತ್ತಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಜನರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದೆಂಬ ನಿರೀಕ್ಷೆಯಿದೆ ಎಂದು ಎಸ್ ಪಿ ಹೇಳಿದ್ದಾರೆ.