ತೆಂಗಿನಕಾಯಿ ದರ ಏರಿಕೆ : ಉ ಕ ಬೆಳೆಗಾರರಲ್ಲಿ ಸಂತಸ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಜಿಲ್ಲೆಗೆ ತೆಂಗಿನಕಾಯಿಗಳ ಪೂರೈಕೆಯಲ್ಲಿ ಕೊರತೆಯಾಗಿದ್ದರಿಂದ ದರ ಗಗನಕ್ಕೇರಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ ಮೂಡುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕೆ ಬೆಳೆಗಳಲ್ಲಿ ತೆಂಗು ಪ್ರಮುಖ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ 8,770 ಹೆಕ್ಟೆರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು, ಸುಮಾರು 25,000ಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. ವರ್ಷಕ್ಕೆ ಸುಮಾರು 1.49 ಕೋಟಿ ತೆಂಗಿನಕಾಯಿಗಳು ಮಾರುಕಟ್ಟೆಗೆ ಬರುತ್ತವೆ. ಊಟ ಹಾಗೂ ಉಪಹಾರಕ್ಕೆ ನಮ್ಮ ಜಿಲ್ಲೆಯಲ್ಲಿ ತೆಂಗಿನಕಾಯಿಗಳನ್ನು ಪ್ರತಿನಿತ್ಯ ಬಳಸುವುದರಿಂದ ತೆಂಗಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ತೆಂಗಿನಎಣ್ಣೆ ಸೇರಿದಂತೆ ಇತರೆ ಆಹಾರೋತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಜಿಲ್ಲೆಯಲ್ಲಿ ಬೆಳೆಯುವ ಒಟ್ಟೂ ತೆಂಗಿನಕಾಯಿಗಳು ಜಿಲ್ಲೆಯ ಶೇ 50ರಷ್ಟು ಬೇಡಿಕೆಯನ್ನು ಮಾತ್ರ ಪೂರೈಸಬಲ್ಲದು. ಉಳಿದ ಶೇ 50ರಷ್ಟು ಬೇಡಿಕೆಯ ಪೂರೈಕೆಗೆ ಪರ ಜಿಲ್ಲೆ ಹಾಗೂ ರಾಜ್ಯಗಳನ್ನು ಅವಲಂಬಿಸುವ ಅನಿವಾರ್ಯತೆ ಇದೆ.

ಹಾಸನದ ಅರಸಿಕೆರೆ, ತುಮಕೂರು ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಸುತ್ತಾರೆ. ಆದರೆ ಕಳೆದ ವರ್ಷ ಮಳೆ ಅಭಾವದ ಕಾರಣ ತೆಂಗಿನ ಬೆಳೆಯಲ್ಲಿ ತೀವ್ರ ಕುಸಿತ ಉಂಟಾಗಿದಲ್ಲದೇ, ಕೇರಳದಿಂದ ಕರ್ನಾಟಕಕ್ಕೆ ಪೂರೈಕೆಯಾಗುವ ತೆಂಗಿನಕಾಯಿಗಳಿಗೆ ಜಿಎಸ್ಟಿ ಸಮಸ್ಯೆಯಿಂದಲೂ ತೀರಾ ಕುಸಿತ ಉಂಟಾಗಿದೆ. ಇದರಿಂದ ಜಿಲ್ಲೆಯಲ್ಲಿ ತೆಂಗಿನಕಾಯಿಗಳ ಕೊರತೆ ಉಂಟಾಗಿ, ಬೆಲೆ ಏರಿಕೆಯಾಗಲು ಕಾರಣವಾಗಿದೆ. ಅಲ್ಲದೇ ಬೈಯೋ ಡೀಸೆಲ್ ಬೆಲೆ ಏರಿಕೆಯಾದಾಗ ಕಾಯಿಗಳ ದರದಲ್ಲೂ ಹೆಚ್ಚಳವುಂಟಾಗುತ್ತದೆ ಎಂಬುದು ಕೆಲವು ಆರ್ಥಿಕ ತಜ್ಞರ ಅಭಿಮತ.

ಕಳೆದ ವರ್ಷ ಕೇಜಿಗೆ 25ರಿಂದ 30ರೂ ಇದ್ದ ತೆಂಗಿನಕಾಯಿಯ ಬೆಲೆ ಈಗ 40ರಿಂದ 50 ರೂ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ದುಪ್ಪಟ್ಟಾಗಿದೆ. ಬೆಲೆಯಲ್ಲಿ ಭಾರೀ ಹೆಚ್ಚಳ ಉಂಟಾಗಿರುವುದು ಇದೇ ಮೊದಲ ಬಾರಿಯಾಗಿದ್ದರಿಂದ ಜಿಲ್ಲೆಯ ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ ಮೂಡುವಂತಾಗಿದೆ. ಆದರೆ, ತೆಂಗಿನಎಣ್ಣೆ ಸೇರಿದಂತೆ ಆಹಾರ ಉತ್ಪನ್ನಗಳ ದರ ಕೂಡ ಜಾಸ್ತಿಯಾಗಿದ್ದರಿಂದ ಗ್ರಾಹಕರಿಗೆ ನೇರವಾಗಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೆಂಗಿನಕಾಯಿಗಳ ದರ ದುಪ್ಪಟ್ಟಾದಂತೆ ಕಂಗಾಲಾದ ಗ್ರಾಹಕರು ತಮ್ಮ ದಿನನಿತ್ಯದ ಆಹಾರ ಪದಾರ್ಥಗಳ ಬಳಕೆಯಲ್ಲಿ ತೆಂಗಿನಕಾಯಿ ಬಳಕೆಯ ಪ್ರಮಾಣ ಕಡಿಮೆ ಮಾಡಿದ್ದಾರೆ.

 

LEAVE A REPLY