ಯುವತಿ ಆತ್ಮಹತ್ಯೆ ಪ್ರಕರಣ : ತಂಡಗಳೊಳಗೆ ಹೊಡೆದಾಟ

ಮೃತ ಯುವತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಉಳ್ಳಾಳ ಪೊಲೀಸರು ಹಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಬ್ಯೂಟೀಷಿಯನ್ ಆಗಿದ್ದ ಮಧುಶ್ರೀ (21) ಎಂಬಾಕೆ ಶನಿವಾರ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಸಾಯುವ ಸಂದರ್ಭದಲ್ಲಿ ಈಕೆ ಕೈಯಲ್ಲಿ ಸೂರಜ್ ಎಂಬ ಹೆಸರು ಬರೆದುಕೊಂಡಿದ್ದಳು. ಈತನೇ ಈಕೆಯ ಸಾವಿಗೆ ಕಾರಣನಾಗಿದ್ದಾನೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ತಂಡವೊಂದು ಈತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು.

ಸೂರಜ್ ಎಂಬಾತಗೆ ಪಂಡಿತ್ ಹೌಸಿನ ಸುನೀಲ್, ವಿಶ್ವನಾಥ್, ಪವನ್ ಹಲ್ಲೆ ನಡೆಸಿದ್ದು, ಈ ವೇಳೆ ಸೂರಜನ ತಲೆ ಒಡೆದಿದೆ. ಇದನ್ನು ಕಂಡ ಸೂರಜ್ ಸ್ನೇಹಿತರೂ ಕೂಡಾ ಎದುರಾಳಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಆದರೆ ಹಲ್ಲೆ ನಡೆಸಿದ ತಂಡಕ್ಕೂ ಸೂರಜಗೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ಪ್ರಕರಣ ಒಟ್ಟು ನಿಗೂಢವಾಗಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.