ಮನೆ ಕಾವಲಿಗೆ ಗೃಹ ಸುರಕ್ಷಾ ಆ್ಯಪ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನೆಗೆ ಕನ್ನ ಹಾಕುವ ಕಳ್ಳಕಾಕರ ಭಯಬಿಟ್ಟು ನಿಶ್ಚಿಂತೆಯಾಗಿ ದೂರದೂರಿಗೆ ಪ್ರವಾಸ ಹೋಗಿ ಬರುವ ನಿಟ್ಟಿನಲ್ಲಿ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಿನೂತನ ಮಾದರಿಯ ಆ್ಯಪ್ ಕಂಡುಹಿಡಿದಿದ್ದಾರೆ. ಇದರ ಹೆಸರೇ `ಗೃಹ ಸುರಕ್ಷಾ’.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲ ಬಾರಿಗೆ ಕಾರ್ಯಗತಗೊಳಿಸಲಾಗುತ್ತಿರುವ ಈ ಆ್ಯಪ್ ಆಧರಿತ ಸೇವೆ ನೀಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ದ ಕ ಜಿಲ್ಲಾ ಪೊಲೀಸ್ ವತಿಯಿಂದ ನಿರ್ಮಿಸಲಾಗಿರುವ ಗೃಹ ಸುರಕ್ಷಾ ಎನ್ನುವ ವಿಶೇಷ ಸೇವೆಯ ವಾಟ್ಸಪ್ ನಂಬ್ರ 9480805300ಗೆ ಕರೆ ಮಾಡಿದರೆ ಪೊಲೀಸರು ನಿಮ್ಮ ಮನೆಗೆ ರಕ್ಷಣೆ ನೀಡುತ್ತಾರೆ.

ಈ ಸೇವೆ ಹೇಗೆ

ಪೊಲೀಸ್ ಇಲಾಖೆ ನೀಡಿರುವ ವಾಟ್ಸಪ್ ನಂಬರಿಗೆ ಸ್ಮಾರ್ಟ್ ಫೋನ್ ಕಾಂಟ್ಯಾಕ್ಟ್ ಲಿಸ್ಟಿಗೆ ಸೇರಿಸಬೇಕು. ಬಳಿಕ ಲೊಕೇಶನ್ ಆನ್ ಮಾಡಬೇಕು. ವಾಟ್ಸಪ್ಪಿ ಹೋಗಿ ಪೊಲೀಸ್ ವಾಟ್ಸಪ್ ಸಂಖ್ಯೆ ಸೆಲೆಕ್ಟ್ ಮಾಡಿ ಕರೆಂಟ್ ಲೊಕೇಶನ್ ಕಳುಹಿಸಬೇಕು. ಮನೆ ವಿಳಾಸ ಹಾಗೂ ಯಾವ ದಿನಾಂಕದಿಂದ ಎಷ್ಟು ದಿನಗಳವರೆಗೆ ಮನೆಯಲ್ಲಿ ಇರೋದಿಲ್ಲ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಸಬೇಕು. ಮನೆಯ ಫೋಟೋ ಸಹಿತ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡಬೇಕು. ಈ ಎಲ್ಲಾ ಮಾಹಿತಿಯನ್ನು ಕಂಟ್ರೋಲ್ ರೂಂ ದಾಖಲಿಸುತ್ತದೆ. ಬಳಿಕ ಆಯಾ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ರವಾನಿಸುತ್ತದೆ.

ಗೃಹ ಸುರಕ್ಷಾ ವ್ಯವಸ್ಥೆಯಲ್ಲಿ ದೂರು ನೀಡಿದ ಬಳಿಕವೂ ಕಳವು ನಡೆದಲ್ಲಿ ಅದನ್ನು ಪೊಲೀಸ್ ನಿರ್ಲಕ್ಷ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.