ಎತ್ತಿನಹೊಳೆ ಯೋಜನೆ ಅನುಷ್ಠಾನ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಗಳ ವಿರುದ್ಧ ಪರಿಸರವಾದಿಗಳ ಆಕ್ರೋಶ

ಸಕಲೇಶಪುರ : ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಅನುಷ್ಠಾನ ಪ್ರದೇಶಕ್ಕೆ ಭೇಟಿ ನೀಡಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡದ ವಿರುದ್ಧ ಪರಿಸರವಾದಿಗಳು ಮುನಿಸಿಕೊಂಡಿದ್ದಾರೆ.

ಕೇಂದ್ರ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಯೋಜನೆ ಅನುಷ್ಠಾನ ಪ್ರದೇಶದ ವೀಕ್ಷಣೆಗೆ ಆಗಮಿಸಿದ್ದ ತಂಡ ಏಕಪಕ್ಷಿಯವಾಗಿ ನಡೆದುಕೊಳ್ಳುತ್ತಿದ್ದು, ಈ ತಂಡದಿಂದ ನ್ಯಾಯಾಲಯಕ್ಕೆ ನಿಷ್ಪಕ್ಷಪಾತ ವರದಿ ಸಲ್ಲಿಕೆಯಾಗುವುದು ಅನುಮಾನ ಎಂಬ ನಿಲುವಿಗೆ ಬಂದಿರುವ ಪರಿಸರವಾದಿಗಳು, ಮಂಗಳವಾರ ಅರಣ್ಯ ಹಾಗೂ ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ಹಮ್ಮಿಕೊಂಡಿದ್ದ ಅನುಷ್ಠಾನ ಪ್ರದೇಶದ ಪರಿಶೀಲನೆಯಿಂದ ದೂರವೆ ಉಳಿಯಿತು.

ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಪರಿಸರವಾದಿಗಳಿಗೆ ಕೇಂದ್ರ ತಂಡ ನೋಟಿಸ್ ನೀಡಿ ಅನುಷ್ಠಾನ ಪ್ರದೇಶಕ್ಕೆ ಆಗಮಿಸಬೇಕಿತ್ತು. ಆದರೆ ಇದ್ಯಾವ ಕಾರ್ಯವು ಆಗಲಿಲ್ಲ, ಸೌಜನ್ಯಕ್ಕೂ ಪರಿಸರವಾದಿಗಳ ಹೇಳಿಕೆ ಪಡೆಯಲಿಲ್ಲ, ಪರಿಸರವಾದಿಗಳು ಸೂಚಿಸಿದ ಸ್ಥಳಗಳನ್ನು ಬಿಟ್ಟು ಬೇರೆ ಪ್ರದೇಶದ ವೀಕ್ಷಣೆಗೆ ತೆರಳಿದ್ದಲ್ಲದೆ, ಕರ್ನಾಟಕ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆಗೆ ಹೆಚ್ಚಿನ ಮನ್ನಣೆ ನೀಡಿದರು ಎಂದು ಆರೋಪಿಸುತ್ತಿರುವ ಹೋರಾಟದ ಮುಂಚೂಣಿ ನಾಯಕರರಾದ ಕಿಶೋರ್, ಮಂಗಳೂರಿನ ಪುರುಷೋತ್ತಮ ಚಿತ್ರಾಪುರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ ವಿ ಭಟ್ ಮಂಗಳವಾರ ಹಮ್ಮಿಕೊಂಡಿದ್ದ ಪರಿಶೀಲನೆಯಿಂದ ದೂರ ಉಳಿದರು.