ಗಾಂಧಿಕಟ್ಟೆ ಅಶ್ವಥ್ಥ ಮರ ತೆರವಿಗೆ ಹಸಿರುನಿಶಾನೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರಿನ ಗಾಂಧಿಕಟ್ಟೆಯ ಬಳಿ ಇರುವ ಹಳೆಯ ಕಾಲದ ಅಶ್ವಥ್ಥ ಮರವನ್ನು ತೆರವು ಮಾಡಲು ಅರಣ್ಯ ಇಲಾಖೆ ಹಸಿರುನಿಶಾನೆ ತೋರಿಸಿದೆ.

ನೂತನ ಬಸ್ ನಿಲ್ದಾಣವಾದ ಬಳಿಕ ಅಶ್ವಥ್ಥ ಮರ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಕುರಿತು ಇತ್ತೀಚೆಗೆ ಶಾಸಕರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮರವನ್ನು ತೆರವು ಮಾಡುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಗಿತ್ತು.

ಮರದ ಬಳಿ ದೇವರ ಕಟ್ಟೆಯಿದ್ದು ಗಾಂಧಿಯ ಪ್ರತಿಮೆಯೂ ಇದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ರೂ ಖರ್ಚು ಮಾಡಿ ಗಾಂಧಿಕಟ್ಟೆಯನ್ನು ಅಭಿವೃದ್ದಿಪಡಿಸಲಾಗಿತ್ತು. ಆದರೆ ಬಸ್ ನಿಲ್ದಾಣದ ಕಾಮಗಾರಿ ಕಾರಣಕ್ಕೆ ಕಟ್ಟೆಯು ತನ್ನ ಎಲ್ಲಾ ಸೌಂದರ್ಯವನ್ನು ಕಳೆದುಕೊಂಡಿದೆ.

ಮರವನ್ನು ತೆರವು ಮಾಡಿದರೆ ಗಾಂಧಿಯ ಪ್ರತಿಮೆ ಮಾತ್ರ ಉಳಿಯಲಿದೆ. ಅಲ್ಲಿರುವ ಕಟ್ಟೆಯನ್ನು ಬಸ್ ನಿಲ್ದಾಣದ ಮುಂಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ.

ಮರ ಹಾಗೂ ಕಟ್ಟೆಯನ್ನು ತೆರವು ಮಾಡದಂತೆ ಈ ಹಿಂದೆ ಕೆಲವರಿಂದ ಆಗ್ರಹವೂ ವ್ಯಕ್ತವಾಗಿತ್ತು. ಆದರೆ ಮರದ ಸುತ್ತಲೂ ಮಣ್ಣು ತೆಗೆಯಲಾಗಿರುವ ಕಾರಣ ಗಾಳಿ ಬಂದರೆ ಮರ ಸಾರ್ವಜನಿಕರ ಮೇಲೆ ಬೀಳುವ ಅಪಾಯವಿದ್ದು ಇಲಾಖೆ ಮರವನ್ನು ತೆರವು ಮಾಡಲು ಮುಂದಾಗಿದೆ. ಮರವು ತೆರವು ಆದಲ್ಲಿ ಪುತ್ತೂರಿನ ಐತಿಹಾಸಿಕ ಅಶ್ವಥ್ಥ ಮರದ ಇತಿಹಾಸವೂ ಕೊನೆಗೊಳ್ಳಲಿದೆ.