ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ಯೋಜನೆಗೆ ಕೇಂದ್ರ ಹಸಿರು ನಿಶಾನೆ

ಸಾಂದರ್ಭಿಕ ಚಿತ್ರ

 

1.73 ಲಕ್ಷ ಮರ ಬಲಿ ಪಡೆಯಲಿದೆ ಇದು

ವಿಶೇಷ ವರದಿ

ಕಾರವಾರ : ಪಶ್ಚಿಮ ಘಟ್ಟದ ದಟ್ಟ ಅರಣ್ಯಗಳ ನಡುವಿನಿಂದ ಹಾದು ಹೋಗಲಿರುವ ಹುಬ್ಬಳ್ಳಿ-ಅಂಕೋಲಾ ನಡುವಣ ವಿವಾದಿತ ರೈಲು ಮಾರ್ಗ ಯೋಜನೆಯ ಪ್ರಥಮ ಹಂತಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೆಲವು ಷರತ್ತುಗಳೊಂದಿಗೆ ಹಸಿರು ನಿಶಾನೆ ನೀಡಿದೆ.

1997ರಲ್ಲಿ ಈ ಯೋಜನೆ ಮೊದಲು ಪ್ರಸ್ತಾಪಿಸಲ್ಪಟ್ಟು, 1999ರಲ್ಲಿ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದರೂ ಪರಿಸರವಾದಿಗಳಿಂದ ತೀವ್ರ ವಿರೋಧಕ್ಕೊಳಗಾಗಿ ಹಾಗೂ ನ್ಯಾಯಾಲಯಗಳಿಂದಲೂ ತರಾಟೆಗೊಳಗಾಗಿ ಯೋಜನೆ ಆರಂಭಕ್ಕೆ ವಿಳಂಬವಾಗಿತ್ತು. ಈ ಯೋಜನೆಗಾಗಿ 1,473 ಎಕರೆ ಅರಣ್ಯ ಪ್ರದೇಶಗಳಲ್ಲಿರುವ 1.73 ಲಕ್ಷಕ್ಕೂ ಅಧಿಕ ಮರಗಳನ್ನು ಕಡಿದುರುಳಿಸಬೇಕಾಗಿದೆಯಲ್ಲದೆ ಎರಡು ಹುಲಿ ಸಂರಕ್ಷಣಾ ವಲಯಗಳೂ ಬಾಧಿತವಾಗಲಿದೆ.

ಈ ರೈಲು ಮಾರ್ಗದಲ್ಲಿ ನಿರ್ಮಿಸಲಾಗುವ ಸುರಂಗಗಳ ಸಂಖ್ಯೆ ಹೆಚ್ಚಿಸುವಂತೆ ಸಮಿತಿ ರೈಲ್ವೆಗೆ ಸೂಚಿಸಿದೆ. ಆದರೆ ಪ್ರಸ್ತಾವನೆಯಂತೆ ಈ 168.3 ಕಿ ಮೀ ಉದ್ದದ ರೈಲು ಮಾರ್ಗದಲ್ಲಿ 34 ಸುರಂಗಗಳಿರುತ್ತವೆ. ವನ್ಯಪ್ರಾಣಿಗಳಿಗೆ ಅಂಡರ್ ಪಾಸ್ ನಿರ್ಮಾಣ ಸಹಿತ ಹಲವು ಇತರ ಪರಿಹಾರ ಕ್ರಮಗಳನ್ನು ಪರಿಷ್ಕರಿಸುವಂತೆಯೂ ಸಮಿತಿ ಹೇಳಿದೆ.

ಬಹಳಷ್ಟು ಅರಣ್ಯ ನಾಶಕ್ಕೆ ಕಾರಣವಾಗಬಹುದಾದ ಇಂತಹ ಯೋಜನೆಯ ಅಗತ್ಯವಿದೆಯೇ ಎಂಬುದು ತನಗಿನ್ನೂ ಮನದಟ್ಟಾಗಿಲ್ಲ ಎಂದು ಸಮಿತಿ ತನ್ನ ಮೇ 5ರ ಸಭೆಯಲ್ಲಿ ಹೇಳಿರುವ ಹೊರತಾಗಿಯೂ ರೈಲ್ವೇ ಸಚಿವಾಲಯ ಹಾಗೂ ಕರ್ನಾಟಕ ಮೂಲದ ಕೇಂದ್ರ ಸಚಿವರುಗಳು ಈ ಯೋಜನೆ ಯಾವುದೇ ಬೆಲೆ ತೆತ್ತಾದರೂ ಮುಂದುವರಿಯುವುದು ಎಂದು ಹೇಳಿಕೊಂಡಿದ್ದರು.

ಈ ಹಿಂದೆ ಈ ಯೋಜನೆಗಾಗಿ 2.02 ಲಕ್ಷ ಮರಗಳನ್ನು ಕಡಿದುರುಳಿಸಬೇಕಾಗಬಹುದು ಎಂದು ಹೇಳಲಾಗಿದ್ದರೂ ಈಗಿನ ಅಂದಾಜಿನ ಪ್ರಕಾರ 1.73 ಲಕ್ಷ ಮರಗಳು ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ.