ಪಾಳು ಬಿದ್ದ ಭೂಮಿಯಲ್ಲಿ ಹಸಿರು ಕ್ರಾಂತಿ

ಕೃಷಿ ಕ್ರಾಂತಿಗೆ ಕಾರಣವಾದ ಜಮೀನು (ಸಂಗ್ರಹ ಚಿತ್ರ)

ಮಂಜಲ್ಪಾದೆ 6 ಎಕ್ರೆ ಜಮೀನಿನಲ್ಲಿ ಭತ್ತ, ಉದ್ದಿನ ಬೇಳೆ ಕೃಷಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆ ಅನ್ನಪ್ಪಾಡಿಯ ನಾಲ್ವರು ಕೃಷಿಕರು ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಿದ್ದಾರೆ. ಸುಮಾರು 6 ಎಕರೆ ಜಮೀನಿನಲ್ಲಿ ಮಾಡಿರುವ ಈ ಕೃಷಿ ಕ್ರಾಂತಿ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ತುಳುನಾಡು ಕೃಷಿ ಕ್ರಾಂತಿ, ತುಂಬೆ ವೆಂಟೆಂಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಶ್ರಯದಲ್ಲಿ ಈ ಕೃಷಿ ಕ್ರಾಂತಿ ನಡೆಯಿತು.

ಮಂಜಲ್ಪಾದೆಯ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ರವಿ ಮಂಜಲ್ಪಾದೆ, ಕುಶೇಷ ಅನ್ನಪ್ಪಾಡಿ, ಪುರಂದರ ಮಂಜಲ್ಪಾದೆ, ಯಶೋಧರ ಕೊಟ್ಟಾರಿ ಆಲಾಡಿ ಅವರ 6 ಎಕ್ರೆ ಪಾಳು ಗದ್ದೆಯಲ್ಲಿ ಈ ವಿನೂತನ ಸಾಧನೆಯ ಕೃಷಿ ಕ್ರಾಂತಿ ಮಾಡಲಾಗಿದೆ.

ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಕೃಷಿಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ಪಾಳು ಬಿದ್ದ ಕೃಷಿ ಭೂಮಿಯಲ್ಲಿ ಬಿತ್ತನೆ ಬೀಜ ಮತ್ತು ಉದ್ದಿನ ಬೇಳೆ ಬೆಳೆಸುವ ಕಾರ್ಯ ಸುಲಭದ ಮಾತೇನಲ್ಲ. ಒಂದೂವರೆ ವರ್ಷದೊಳಗೆ ಉದ್ದಿನ ಬೇಳೆ ಕಟಾವಿಗೆ ಸಿದ್ಧವಾಗುತ್ತದೆ. ಅಲ್ಲದೆ ಮುಂದಿನ ಮೂರು ತಿಂಗಳೊಳಗೆ ಕುಚ್ಚಲು ಅಕ್ಕಿ 120 ದಿನಗಳೊಳಗೆ ಸುಗ್ಗಿಗೆ ತಯಾರಾಗುತ್ತದೆ. ಜಯಾ ಮಾದರಿ(ಕುಚ್ಚಲಕ್ಕಿ)ಯ ಅಕ್ಕಿಯನ್ನು ಈ ಕೃಷಿ ಭೂಮಿಯಲ್ಲಿ ಬೆಳೆಸಲಾಗಿದೆ. ಫÀಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಹಡೀಲು ಬಿಡಬಾರದು. ಈ ಜಮೀನಿನ ಮೂಲಕ ನಮ್ಮ ಅನ್ನದ ಬಟ್ಟಲನ್ನು ನಾವೇ ತುಂಬಿಸೋಣ” ಎಂದರು.

“ಕರ್ನಾಟಕ ರಾಜ್ಯ ರೈತ ಸಂಘದ ದಕ್ಷಿಣ ಕನ್ನಡ ಘಟಕ ಮತ್ತು ಹಸಿರು ಸೇನೆ ಜಂಟಿಯಾಗಿ ವಿದ್ಯಾರ್ಥಿಗಳನ್ನು ಕೃಷಿ ಚಟುವಟಿಕೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ `ವಿದ್ಯಾರ್ಥಿಗಳ ಕಡೆಗೆ ರೈತರ ನಡಿಗೆ’ ಎನ್ನುವ ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ಪ್ರೌಢ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ಕೃಷಿ ಚಟುವಟಿಕೆಯತ್ತ ಕರೆತರಬೇಕು ಎನ್ನುವ ಆಶಯ ನಮ್ಮದು ಎನ್ನುತ್ತಾರೆ” ಶೆಟ್ಟಿ. ಈಗಾಗಲೇ ಸಂಘ ದಕ್ಷಿಣ ಕನ್ನಡ ಜಿಲ್ಲೆಯ 8 ಶಾಲೆ/ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.