ಹಣದ ಲಾಲಸೆ ತಂದಿತ್ತ ಸಂಕಟ

ಆಕ್ಸಿಸ್ ಬ್ಯಾಂಕಿನಿಂದ ಏಳೂವರೆ ಕೋಟಿ ರೂ ಅಪಹರಿಸಿದ ದುಷ್ಕರ್ಮಿಗಳು ಬಂಧನಕ್ಕೆ ಮುನ್ನ ಏನೆಲ್ಲ ಅವಸ್ಥೆಪಟ್ಟರು ಗೊತ್ತಾ ?

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಯೆಯ್ಯಾಡಿ ಆಕ್ಸಿಸ್ ಬ್ಯಾಂಕಿನಿಂದ ಬೆಂಗಳೂರಿನ ಕೊರಮಂಗಲ ಶಾಖೆಗೆ ರವಾನಿಸಲಾಗಿದ್ದ ರೂ 7.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟ ಮೂವರು ಆರೋಪಿಗಳು ಲೂಟಿಗೈದ ಹಣದೊಂದಿಗೆ ಕಾಡಿನಲ್ಲಿ ಮೂರು ದಿನಗಳ ಕಾಲ ಅನ್ನಾಹಾರವಿಲ್ಲದೆ ಸೊಳ್ಳೆ, ಜೇನುನೊಣಗಳ ಕಾಟ ಸಹಿಸಿಕೊಂಡು ಇದ್ದರಂತೆ. ಕೊಡಗಿನ ಸೋಮವಾರಪೇಟೆಯಿಂದ 20 ಕಿ ಮೀ ದೂರದ ಕುಂಬಾರಗಡಿಗೆ ಎಂಬ  ಗ್ರಾಮದ ಪಕ್ಕದ ಅರಣ್ಯ ಪ್ರದೇಶದಲ್ಲಿ ಈ ಮೂವರೂ ಪತ್ತೆಯಾಗಿದ್ದರು.

ಮೇ 11ರಂದು ಅವರು ಹಣದೊಂದಿಗೆ ಪರಾರಿಯಾಗಿದ್ದರೆ, ಮೂರು ದಿನಗಳ ತನಕ ಕಾಡಿನ ಮಧ್ಯೆ ಟೆಂಟೊಂದರಲ್ಲಿ ಕೇವಲ ನೀರು, ಬಿಸ್ಕತ್ತು ಸೇವಿಸಿ  ಇರಬೇಕಾಗಿತ್ತಲ್ಲದೆ ಸದಾ ವನ್ಯ ಪ್ರಾಣಿಗಳ ಭಯವೂ ಅವರನ್ನು ಕಾಡಿತ್ತು. ಅಷ್ಟೇ ಅಲ್ಲ, ನುಸಿ, ಜೇನು ನೊಣಗಳ ಕಾಟ ಸಹಿಸಲಸಾಧ್ಯವಾಗಿದ್ದರೆ  ಆಗಾಗ ಸುರಿಯುತ್ತಿದ್ದ ಮಳೆಯಲ್ಲಿ ಅವರ ಟೆಂಟ್ ನೆನೆದು ಹೋಗಿತ್ತು. ಲೂಟಿಗೈದ  ಭಾರೀ ಮೊತ್ತದ ನೋಟುಗಳನ್ನು ಒದ್ದೆಯಾಗದಂತೆ ತಡೆಯುವುದೇ ಅವರಿಗೆ ಹರಸಾಹಸವಾಗಿಬಿಟ್ಟಿತ್ತು, ಎಂದು ಸಿಸಿಆರ್ಬಿ ಎಸಿಪಿ ವೆಲಂಟೈನ್ ಡಿ’ಸೋಜ ವಿವರಿಸಿದ್ದಾರೆ.

ಮಂಗಳೂರಿನಿಂದ ಪರಾರಿಯಾದ ಬಳಿಕ ದಾರಿ ಮಧ್ಯದಲ್ಲಿ ತಮ್ಮ ವ್ಯಾನನ್ನು ತೊರೆದು ಹಣದ ಕಂತೆಗಳಿರುವ ಭಾರದ ಚೀಲಗಳನ್ನು ಕಾಡಿಗೆ ಹೊತ್ತೊಯ್ದ  ಆರೋಪಿಗಳು ಸಂಕಟವನ್ನಷ್ಟೇ ಅನುಭವಿಸಿದ್ದರು. ಹತ್ತಿರದ ಕುಂಬಾರನಗಡಿಗೆ ಗ್ರಾಮದಿಂದ ಕನಿಷ್ಠ 12 ದೂರದ ಕಾಡಿನಲ್ಲಿ ಅವರಿದ್ದರೆ, ಅಲ್ಲಿ ಅವರಿಗೆ ನೀರು ಆಹಾರ ಒದಗಿಸುವವರು ಯಾರೂ  ಇರಲಿಲ್ಲ. ಕುಡಿದು ಗಲಾಟೆ ಮಾಡಿ ಸದಾ ಸುದ್ದಿಯಲ್ಲಿರುವ ಆ ಗ್ರಾಮದ ಜನತೆಗೆ ಕಾಡಿನಲ್ಲಿ ಯಾರೋ ವಾಸಿಸುತ್ತಿದ್ದಾರೆಂಬುದನ್ನು ಗ್ರಾಮಸ್ಥರೊಬ್ಬರು ಸುದ್ದಿ ಮುಟ್ಟಿಸಿದ್ದರು, ಕೆಲ ಯುವಕರು ಇದನ್ನನುಸರಿಸಿ ಕಾಡಿನ ದಾರಿ ಕೂಡ ಹಿಡಿದಿದ್ದರು. ಇದು ಪೊಲೀಸರಿಗೆ ಸಹಾಯವಾಗಿ ಪರಿಣಮಿಸಿತು.

ಚಾಲಕ ಕರಿಬಸವ, ಕಸ್ಟೋಡಿಯನ್ ಪರಶುರಾಮ ಹಾಗೂ ಗನ್ ಮೆನ್ ಪೂವಣ್ಣ ಹಾಗೂ ಬಸಪ್ಪ ಕಾಡಿನಲ್ಲಿ ಜತೆಗೆ  ಎರಡು ದಿನ ಇದ್ದರೂ ಮೂರನೇ ದಿನ ಬಸಪ್ಪ ತನ್ನ ಪಾಲಿನ ರೂ 1.2 ಕೋಟಿ ಪಡೆದು ಹೊರನಡೆದಿದ್ದ.  ಕುಂಬಾರನಗಡಿಗೆಯ   ವ್ಯಕ್ತಿಯೊಬ್ಬನ ಬಳಿ ಅವರು ತಮಗೆ ಸುರಕ್ಷಿತ ಸ್ಥಳವೊಂದನ್ನು ಹುಡುಕಲು ಹೇಳಿದ್ದರೆ ಆತ  ಈ ಕಾಡಿನ ಪ್ರದೇಶವನ್ನು ಸೂಚಿಸಿದ್ದನಂತೆ.