ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರ ವಿರುದ್ಧ ಗ್ರಾ ಪಂ ಸಿಬ್ಬಂದಿ ಮುಷ್ಕರ

ಸಾಂದರ್ಭಿಕ ಚಿತ್ರ

ಮಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳು ಮತ್ತು ಉದ್ಯೋಗಿಗಳ ಸಂಘ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸೋಮವಾರದಿಂದ  ಜಿಲ್ಲಾ ಪಂಚಾಯತ್ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಸಿಬ್ಬಂದಿಗಳ ಮೇಲೆ ನೂರಾರು ಕೆಲಸದ ಹೊರೆ ಹೊರಿಸುತ್ತಾರೆ. ಸಿಬ್ಬಂದಿಗಳ ಕೊರತೆಯಿಂದ ಇರುವ ಸಿಬ್ಬಂದಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದೆ. ತಕ್ಷಣವೇ ಖಾಲಿಯಿರುವ ಜಾಗಕ್ಕೆ ಸಿಬ್ಬಂದಿಗಳನ್ನು ನೇಮಿಸಬೇಕು. ಪಂಚಾಯತ್ ಸಿಬ್ಬಂದಿಗಳಿಗೆ ಭಡ್ತಿ, ಪಿಎಫ್ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಗ್ರಾಮ ಪಂಚಾಯತ್ ಉದ್ಯೋಗಿಗಳು, ಪಿಡಿಒಗಳು, ಸೆಕ್ರೆಟರಿಗಳು ಮತ್ತು ಅಕೌಂಟ್ ಅಸಿಸ್ಟೆಂಟುಗಳು ಸರ್ಕಾರ ಕೊಟ್ಟ ಗುರಿಯನ್ನು ತಲುಪಲು ವಿಶ್ರಾಂತಿಯಿಲ್ಲದೆ ದುಡಿಯುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡಕ್ಕೂ ಸಂಬಂಧಿಸಿದ ಕೆಲಸಗಳನ್ನು ಸಿಬ್ಬಂದಿಗಳು ಪೂರೈಸಬೇಕು. ಆದರೆ ಈ ಸಿಬ್ಬಂದಿಗಳು ಉದ್ಯೋಗ ಭದ್ರತೆ, ಭಡ್ತಿ, ಪಿಎಫ್ ಮತ್ತು ಇತರ ಪ್ರಮುಖ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇರುವ ಸಿಬ್ಬಂದಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದೆ” ಎಂದು ಸಂಘದ ಜಿಲ್ಲಾಧ್ಯಕ್ಷ ಮತ್ತು ಲಾೈಲ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಿ ಎಚ್ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಜಿಲ್ಲಾ ಪಂಚಾಯತ್ ಕೆಲಸಗಾರರು ಪಿ ಎಫ್ ಪಡೆಯುತ್ತಿಲ್ಲ, ಏಕೆಂದರೆ ನಿಯಮದ ಪ್ರಕಾರ ಗ್ರಾಮವನ್ನು ಒಂದು ಘಟಕ ಎಂದು ಪರಿಗಣಿಸಲ್ಪಟ್ಟಿಲ್ಲ. ಸೌಲಭ್ಯಗಳು ದೊರೆಯಬೇಕಾದರೆ ಒಂದು ಘಟಕದಲ್ಲಿ ಕಡಿಮೆ ಪಕ್ಷ 10 ಸದಸ್ಯರನ್ನು ಹೊಂದಿರಬೇಕು. ಪಂಚಾಯತ್ ಉದ್ಯೋಗಿಗಳು ಆರೋಗ್ಯ ವಿಮೆ ಲಾಭಗಳನ್ನು ಪಡೆಯುತ್ತಿಲ್ಲ. ಆದರೆ ಈ ಉದ್ದೇಶಕ್ಕೆ ವಾರ್ಷಿಕ ರೂ 700 ಕೋಟಿ  ಮೀಸಲಿಡಲಾಗುತ್ತದೆ. ಪ್ರಸಕ್ತ ಸಿಬ್ಬಂದಿಗಳ ಪಂಚಾಯತಿನಲ್ಲಿ ಹುದ್ದೆಗಳೆಲ್ಲಾ ಖಾಲಿಯಿದ್ದು, ಇರುವ ಸಿಬ್ಬಂದಿಗಳು ಸರ್ಕಾರಿ ರಜಾ ದಿನಗಳಲ್ಲೂ ಕೆಲಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ” ಎಂದು ಸುಳ್ಯ ತಾಲೂಕು ಗ್ರಾಮಪಂಚಾಯತ್ ಉದ್ಯೋಗಿಗಳ ಸಂಘದ ಅಧ್ಯಕ್ಷ ತೀರ್ಥರಾಮ ಹೇಳಿದ್ದಾರೆ.