ಸಾರ್ವಜನಿಕ ಸ್ಥಳಕ್ಕೆ ಕೊಳಚೆ ನೀರು ತಡೆದ ಪಂಚಾಯತ್

ಕರಾವಳಿ ಅಲೆ ಇಂಪ್ಯಾಕ್ಟ್

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಬಾಡಿಗೆ ವಸತಿಗೃಹಗಳ ಕಟ್ಟಡ ಮಾಲಕರ ಎಡವಟ್ಟಿನಿಂದಾಗಿ ರಾಗಂ ಜಂಕ್ಷನ್ ಸಾರ್ವಜನಿಕ ಪರಿಸರದ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಪ್ರಯಾಣಿಕರು ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವ ಸುದ್ದಿ `ಕರಾವಳಿ ಅಲೆ’ಯಲ್ಲಿ ಪ್ರಕಟಗೊಂಡ ಬಳಿಕ ಪಂ ಅಧಿಕೃತರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ.

ಆಗಸ್ಟ್ 18ರಂದು ಸೇರಿದ ಮಂಜೇಶ್ವರ ಗ್ರಾ ಪಂ ಬೋರ್ಡ್ ಸಭೆಯಲ್ಲಿ ಕಟ್ಟಡ ಮಾಲಕರಿಗೆ ನೋಟಿಸು ನೀಡಿ ಬಳಿಕ ಸೋಮವಾರ ಘಟನಾ ಸ್ಥಳಕ್ಕಾಗಮಿಸಿದ ಪಂ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ನೇತೃತ್ವದ ತಂಡ ಬುಲ್ಡೋಜರ್ ಮೂಲಕ ಕೊರೆದು ಕೊಳಚೆ ನೀರು ಬರುವ ಸ್ಥಳವನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿದೆ. ಕಟ್ಟಡ ಮಾಲಕರ ಒತ್ತಾಸೆಗೆ ಮಣಿಯದೆ ಅಧ್ಯಕ್ಷರು ನಡೆಸಿದ ಕಾರ್ಯಾಚರಣೆ ನಾಗರಿಕ ವಲಯದಲ್ಲಿ ಭಾರೀ ಪ್ರಶಂಶೆಗೆ ಪಾತ್ರವಾಗಿದೆ.

ಕಟ್ಟಡ ಮಾಲಕರು ಕೊಳಚೆ ನೀರನ್ನು ಸಾರ್ವಜನಿಕ ಸ್ಥಳಕ್ಕೆ ಬಿಡುತ್ತಿರುವ ಪೈಪುಗಳು ಮಣ್ಣಿನಡಿಯಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲಕರಿಗೆ ದಂಡ ವಿಧಿಸುವುದಾಗಿ ಪಂ ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ. ಜತೆಯಾಗಿ ಹೊಸಂಗಡಿ, ಕುಂಜತ್ತೂರು ಸೇರಿದಂತೆ ಪಂ ವ್ಯಾಪ್ತಿಯ ಎಲ್ಲೇ ಇಂತಹ ಕೊಳಚೆ ನೀರುಗಳು ಪತ್ತೆಯಾದಲ್ಲಿ ಕಟ್ಟಡ ಮಾಲಕರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ಕ್ರಮಕ್ಕೆ ಮುಂದಾಗುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.