ಪಂಚಾಯತ್ ಸದಸ್ಯರ ಗೈರಿನಲ್ಲಿ ನಡೆದ ನೀರಸ ಜಮಾಬಂದಿ ಸಭೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಪಡುಪಣಂಬೂರು ಪಂಚಾಯತ್ 2016-17ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಸದಸ್ಯರ ಗೈರಿನ ನಡುವೆ ನೀರಸವಾಗಿ ನಡೆಯಿತು. ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಗÀಬೇಕಿದ್ದರೂ ನೋಡಲ್ ಅಧಿಕಾರಿ ಆಗಮನ ವಿಳಂಬದಿಂದ ಸಭೆ ಆರಂಭವಾಗುವಾಗ ಬರೋಬ್ಬರಿ 12 ಗಂಟೆ. ಸಭೆಗೆ ಎಂಟು ಪಂಚಾಯತ್ ಸದಸ್ಯರು ಗೈರಾಗಿದ್ದರು. ವಿಳಂಬವಾಗಿ ಜಮಾಬಂದಿ ಶುರುವಾದ ಕಾರಣ ಕೆಲ ಗ್ರಾಮಸ್ಥರು ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದರು.

ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆ ತೆರಿಗೆ ವಸೂಲಾತಿ ಬಾಕಿ ಇರುವ ಬಗ್ಗೆ ಗ್ರಾಮಸ್ಥ ಅಲ್ವಿನ್ ತೋಕೂರು ಮಾತನಾಡಿ, ತೆರಿಗೆ ವಸೂಲಾತಿಯಲ್ಲಿ ಪಂಚಾಯತ್ ಉದಾಸೀನ ಸರಿಯಲ್ಲ ಎಂದರು. ಇದಕ್ಕೆ ಗ್ರಾಮಸ್ಥ ದಿನೇಶ್ ಸುವರ್ಣ ಧ್ವನಿಗೂಡಿಸಿ ಮನೆ ತೆರಿಗೆ ಬಾಕಿ ಇದ್ದವರಿಗೆ ನೊಟೀಸ್ ಕಳಿಸಿ ಪಂಚಾಯತ್ ಅಕೌಂಟ್ ನಂಬರ್ ಕೊಟ್ಟು ಕಟ್ಟುವಂತೆ ಸೂಚನೆ ನೀಡಬಹುದು ಎಂದು ಸಲಹೆ ನೀಡಿದರು. ಇದಕ್ಕೆ ನೋಡಲ್ ಅಧಿಕಾರಿ ತೆರಿಗೆ ವಸೂಲಾತಿಯಲ್ಲಿ ವಿಳಂಬವಾಗ ಕೂಡದು ಎಂದು ಪಂಚಾಯತಿ ಅಧಿಕಾರಿಗೆ ಸೂಚಿಸಿದÀರು.

ಪಂಚಾಯತ್ ವ್ಯಾಪ್ತಿಯ ತೋಕೂರಿನಲ್ಲಿ ಹೊಸ ಕೊಳವೆ ಬಾವಿ ಕೊರೆದಿದ್ದರೂ ಪಂಪು ಜೋಡಿಸಿಲ್ಲ ಯಾಕೆ ಎಂದು ಗ್ರಾಮಸ್ಥೆ ಸವಿತಾ ಶರತ್ ಬೆಳ್ಳಾಯರು ಅಧ್ಯಕ್ಷ ಮೋಹನದಾಸರನ್ನು ತರಾಟೆಗೆ ತೆಗೆದುಕೊಂಡರು. ಆಗ ಜಿ ಪಂ ಸದಸ್ಯ ವಿನೋದ್ ಬೊಳ್ಳೂರು ಮಧ್ಯೆ ಪ್ರವೇಶಿಸಿ ಕೆಲ ಮುಲ್ಕಿ ಹೋಬಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ತೆರೆದು ಪಂಪ್ ಜೋಡಿಸದೆ ಹಾಗೆಯೇ ಬಿಟ್ಟಿದ್ದಾರೆ ಎಂದು ಜಿ ಪಂ ಇಂಜಿಯರ್ ಪ್ರಶಾಂತ್ ಆಳ್ವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಶಾಂತ್ ಕೂಡಲೇ ಸರಿಯಾದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರಿ ಇಂಗಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ತೋಕೂರಿನ ಗ್ರಾಮಸ್ಥರೊಬ್ಬರು ಒತ್ತಾಯಿಸಿದರು. ವೇದಿಕೆಯಲ್ಲಿ ನೂತನ ಕರಾವಳಿ ಪ್ರಾಧಿಕಾರದ ಸದಸ್ಯ ಶಾಹುಲ್ ಹಮೀದರನ್ನು ಸನ್ಮಾನಿಸಲಾಯಿತು.