ಸರಕಾರವೇ ನ್ಯಾಯಬೆಲೆ ಅಂಗಡಿಗಳಲ್ಲಿ ಸ್ವೈಪ್ ಮಶೀನು ಅಳವಡಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ಸ್ ಮಶೀನುಗಳನ್ನು ಸರಕಾರ ತನ್ನ ವೆಚ್ಚದಲ್ಲೇ ಅಳವಡಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರದ ಪಿಡಿಎಸ್ ವಿತರಕರ ಹಾಗೂ ಉದ್ಯೋಗಿಗಳ ಸಂಘದ ಮಂಗಳೂರು ವಿಭಾಗ ಆಗ್ರಹಿಸಿದೆ.

ಸ್ವೈಪ್ ಮಶೀನು ಅಳವಡಿಕೆ, ನೆಟ್ವರ್ಕ್ ಸಂಪರ್ಕ, ದುರಸ್ತಿ ಮತ್ತಿತರ ಕಾರ್ಯಗಳ ಜವಾಬ್ದಾರಿಯನ್ನು ಸರಕಾರವೇ ಹೊರಬೇಕೆಂದೂ ಸಂಘ ಬೇಡಿಕೆಯಿಟ್ಟಿದೆ. “ಸರಕಾರವೇ ಸ್ವೈಪ್ ಮಶೀನು ಒದಗಿಸುವುದಾದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಮಶೀನು ಅಳವಡಿಕೆಗೆ ನಮ್ಮ ವಿರೋಧವೇನೂ ಇಲ್ಲ” ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಕೇಶವಮೂರ್ತಿ ಹೇಳಿದ್ದಾರೆ. “ಆದರೆ ಸರಕಾರ ಈ ಮಶೀನುಗಳನ್ನು ಅಂಗಡಿ ಮಾಲಕರೇ ಅಳವಡಿಸಬೇಕೆಂದು ಹೇಳಿದ್ದು ಇವುಗಳಿಗೆ ಕನಿಷ್ಠ ರೂ 15,000 ದಿಂದ ರೂ 20,000 ತನಕ ಖರ್ಚಾಗಲಿದೆ” ಎಂದು ಹೇಳಿದ್ದಾರೆ.

“ನ್ಯಾಯಬೆಲೆ ಅಂಗಡಿಗಳ ಮಾಲಕರ ಸಮಸ್ಯೆ ಪರಿಹಾರಕ್ಕೆ ಸರಕಾರ ವಿಫಲವಾಗಿದೆ” ಎಂದು ಆರೋಪಿಸಿದ ಅವರು, “ಅಂಗಡಿ ಮಾಲಕರಿಗೆ ಕಳೆದೆರಡು ತಿಂಗಳುಗಳಿಂದ ತಮ್ಮ ಕಮಿಷನ್ ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ಸ್ವೈಪ್ ಮಶೀನು ಅಳವಡಿಕೆ ನಮ್ಮ ಮೇಲೆ ಇನ್ನೊಂದು ಹೊರೆಯಾಗಲಿದೆ” ಎಂದು ಅವರು ತಿಳಿಸಿದ್ದಾರೆ.

“ಸ್ವೈಪ್ ಮಶೀನು ಅಳವಡಿಸಿದ ನ್ಯಾಯಬೆಲೆ ಅಂಗಡಿ ಮಾಲಕರಿಗೆ ರೂ 17 ಹೆಚ್ಚುವರಿ ಕಮಿಷನ್ ದೊರೆಯುವುದೆಂದು ಸರಕಾರ ಹೇಳಿದೆ. ಇದು ಎಲ್ಲಿಯ ನ್ಯಾಯ” ಎಂದವರು ಪ್ರಶ್ನಿಸಿದರು. “ಪ್ರತಿಬಾರಿ ಸ್ವೈಪ್ ಮಶೀನು ಉಪಯೋಗಿಸುವಾಗ ಅಂಗಡಿ ಮಾಲಕರ ಬೆರಳಚ್ಚು ಅಗತ್ಯವೆಂದು ಸರಕಾರ ಹೇಳಿರುವುದೂ ಸರಿಯಲ್ಲ. ಈ ನಿಯಮವನ್ನು ಪಾಲಿಸಬೇಕಾದರೆ ಅಂಗಡಿ ಮಾಲಕರು ದಿನವಿಡೀ ಅಂಗಡಿಯಲ್ಲೇ ಇರಬೇಕಾಗುತ್ತದೆ. ನ್ಯಾಯಬೆಲೆ ಅಂಗಡಿಯ ಉದ್ಯೋಗಿಗಳ ಬೆರಳಚ್ಚು ಕೂಡ ಮಾನ್ಯ ಮಾಡಬೇಕು” ಎಂದು ಆಗ್ರಹಿಸಿದರು.

“ನ್ಯಾಯಬೆಲೆ ಅಂಗಡಿಗಳನ್ನು ನಡೆಸುವುದು ಆರ್ಥಿಕವಾಗಿ ಲಾಭದಾಯಕರವಾಗಿಲ್ಲ. ಅಂಗಡಿ ಮಾಲಕರು ತಮ್ಮ ಲೈಸನ್ಸ ಹಿಂದಕ್ಕೆ ನೀಡುವ ನಿಟ್ಟಿನಲ್ಲಿಯೂ ಯೋಚಿಸಲಾರಂಭಿಸಿದ್ದಾರೆ” ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಮಂಗಳೂರು ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲಕರ ಸಂಘದ ಅಧ್ಯಕ್ಷ ಶಿವರಾಂ ಮಳ್ಳಿ ಹೇಳಿದ್ದಾರೆ.