ಕಂಬಳ ಉಳಿಸಲು ರಾಜ್ಯ ಸರ್ಕಾರ ಸರ್ವ ಪ್ರಯತ್ನ ನಡೆಸಲಿದೆ : ರಮಾನಾಥ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದ ಕ ಜಿಲ್ಲೆಯ ಜಾನಪದ ಕಲೆ ಕಂಬಳವನ್ನು ರಕ್ಷಿಸಲು ಕಾಂಗ್ರೆಸ್ ಕಟಿ ಬದ್ಧವಾಗಿದೆ. ಈ ಕಲೆಗೆ ಕಾಂಗ್ರೆಸ್ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ನಿರಂತರ ಪ್ರಯತ್ನ ನಡೆಸಿದೆ. ಈ ನೆಲೆಯಲ್ಲಿ ಕೇಂದ್ರ ಸರ್ಕಾರ ಜಲ್ಲಿಕಟ್ಟುವಿಗೆ ನೀಡಿದ ಪ್ರಾಮುಖ್ಯತೆಯನ್ನು ಕಂಬಳಕ್ಕೂ ನೀಡಬೇಕು. ಆ ಮೂಲಕ ಗೊಂದಲ ಪರಿಹರಿಸಿ, ಕಂಬಳವನ್ನು ಉಳಿಸಬೇಕು” ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ರಮಾನಾಥ ರೈ ಹೇಳಿದರು.

ಈ ಕುರಿತಂತೆ ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕದ್ರಿ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ನಡೆದ ನೂತನ ಎಪಿಎಂಸಿ. ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

“ಕಂಬಳಕ್ಕೆ ಮೊತ್ತ ಮೊದಲ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನುದಾನ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕಿದೆ” ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಪೂರಕ ವಾತಾವರಣ ಇದೆ. ಇದನ್ನು ಪಕ್ಷವನ್ನು ಇನ್ನಷ್ಟು ಸಂಘಟಿಸುವ ಮೂಲಕ ಬಳಸಿಕೊಳ್ಳಬೇಕು ಎಂದ ಅವರು, “ಜಿಲ್ಲೆಯ ಎಲ್ಲಾ ಬ್ಲಾಕುಗಳಲ್ಲಿ ಇಂದಿರಾಗಾಂಧಿ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಗಾಂಧಿ ಕಟ್ಟೆ ನಿರ್ಮಿಸುವುದು. 94ಸಿಸಿ ಹಾಗೂ ಇತರ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯ” ಎಂದು ಕಾರ್ಯಕರ್ತರಿಗೆ ತಿಳಿಹೇಳಿದರು.