ದೇವಳಗಳಲ್ಲಿ ಸ್ವೈಪ್ ಯಂತ್ರ ಅಳವಡಿಸಲಿರುವ ಸರಕಾರ

ಮೈಸೂರು : ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮದಿಂದಾಗಿ ನಗದು ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಸರಕಾರ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದೀಗ ಮುಜರಾಯಿ ಇಲಾಖೆ ತನ್ನ ಅಧೀನದಲ್ಲಿ ಬರುವ ಹಲವು ಪ್ರಮುಖ ದೇವಳಗಳಲ್ಲಿ ಪಿಒಎಸ್ ಅಥವಾ ಕಾರ್ಡ್ ಸ್ವೈಪಿಂಗ್ ಮೆಶೀನುಗಳನ್ನು ಅಳವಡಿಸಿ ಭಕ್ತರಿಗೆ ತಮ್ಮ ದೇಣಿಗೆಯನ್ನು ನೀಡಲು ಸಹಕರಿಸಲು ನಿರ್ಧರಿಸಿದೆ.

ಈಗಾಗಲೇ ಹಲವು ದೇವಳಗಳ ಹುಂಡಿಯಲ್ಲಿ ಭಕ್ತರಿಂದ ನೀಡಲ್ಪಟ್ಟ  ಅಮಾನ್ಯಗೊಂಡ ನೋಟುಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

“ದೇವಳಗಳಲ್ಲಿ ಕಾರ್ಡ್ ಸ್ವೈಪಿಂಗ್ ಮಶೀನುಗಳನ್ನು ಅಳವಡಿಸುವ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ಭಕ್ತರು ದೇವಳಗಳ ಹುಂಡಿಯಲ್ಲಿ ಹಣ ಹಾಕಬಹುದು ಇಲ್ಲವೇ ಈ ಸ್ವೈಪ್ ಮೆಶೀನುಗಳ ಮುಖಾಂತರವೂ ತಮ್ಮ ದೇಣಿಗೆ ನೀಡಬಹುದಾಗಿದ” ಎಂದು ಮುಜರಾಯಿ ತಹಸೀಲ್ದಾರ್ ಯತಿರಾಜ್ ಹೇಳಿದ್ದಾರೆ.

ರಾಜ್ಯದ ಕೆಲ ಪ್ರಮುಖ ದೇವಳಗಳಾದ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳು ಈಗಾಗಲೆ ಆನ್ಲೈನ್ ದೇಣಿಗೆ ವ್ಯವಸ್ಥೆಗಳಾದ ಇ-ಹುಂಡಿ, ಇ-ಕಾಣಿಕೆ  ಹಾಗೂ ಇ-ಸೇವಾ ವ್ಯವಸ್ಥೆ ಜಾರಿಗೊಳಿಸಿವೆ. ಆದರೆ ಹೆಚ್ಚಿನ ಭಕ್ತರು ಗ್ರಾಮೀಣ ಪ್ರದೇಶದವರಾಗಿರುವುದರಿಂದ ಅವರಿಗೆ ಈ ಸೌಲಭ್ಯಗಳ ಬಳಕೆ ಬಗ್ಗೆ ತಿಳಿದಿಲ್ಲ. ಅಂಥವರಿಗೆ ಪಿಒಎಸ್ ಮೆಶೀನುಗಳ ಬಳಕೆ ಸುಲಭವಾಗಲಿದೆ ಎಂಬ ಅಭಿಪ್ರಾಯವಿದೆ.