ಬೇಲೆಕೇರಿ ಗಣಿ ಹಗರಣ ತನಿಖೆ ಎಸೈಟಿಗೆ ವಹಿಸಲಿರುವ ರಾಜ್ಯ ಸರಕಾರ : ಜಯಚಂದ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ ಹಾಗೂ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರಿನ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ 40 ಪ್ರಕರಣಗಳ ತನಿಖೆಯನ್ನು ಮುಂದುವರಿಸಿಕೊಂಡು ಹೋಗಲು ತನಗೆ ಸಾಧ್ಯವಾಗದು ಎಂದು ಸಿಬಿಐ ಹೇಳಿರುವ ಹಿನ್ನೆಲೆಯಲ್ಲಿ ಅವುಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗುವುದು ಎಂದು ರಾಜ್ಯ ಕಾನೂನು ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಚಿವ, ಕೆಲ ಕಂಪೆನಿಗಳು ನಡೆಸಿದ ಅಕ್ರಮಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ, ಹೀಗೆ ಕಂಪೆನಿಗಳಿಂದ ಉಂಟಾಗಿರುವ ನಷ್ಟವನ್ನು ಅವುಗಳಿಂದಲೇ ಭರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ತನಿಖೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಈ ಗಣಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ ಜೆ ಜಾರ್ಜ್ ವಿರುದ್ಧ ದಾಖಲಾಗಿರುವ ಎಫೈಆರ್ ಬಗ್ಗೆಯೇ ಬಿಜೆಪಿ ಮಾತನಾಡುತ್ತಿದೆ ಎಂದು ಅವರು ಹೇಳಿದರು. ರಾಜ್ಯದ ಅತ್ಯಂತ ಭ್ರಷ್ಟ ಸರಕಾರವನ್ನು ನೀಡಿದ್ದ ಬಿಜೆಪಿಗೆ ಯಾವುದೇ ರಾಜ್ಯ ಸಚಿವನ ರಾಜೀನಾಮೆ ಕೇಳುವ ಹಕ್ಕು ಇಲ್ಲ ಎಂದು ಜಯಚಂದ್ರ ಹೇಳಿದ್ದಾರೆ.