ಬಾರು ಮಾಲಕರಿಂದ ಹಳೆ ಬಾಕಿ ಕೇಳಿದ ಸರಕಾರ

ಸಾಂದರ್ಭಿಕ ಚಿತ್ರ

ಬೆಂಗಳೂರು : ಎರಡು ವರ್ಷಗಳ ಹಿಂದೆಯೇ ಕೈಬಿಡಲಾಗಿದ್ದ ಹಳೆಯ ನಿಯಮವೊಂದರ ಪ್ರಕಾರ ಲಕ್ಷಾಂತರ ರೂಪಾಯಿ ಬಾಕಿ ದಂಡ ಸಂಗ್ರಹಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಬಾರು ಮಾಲಕರಿಗೆ ನೊಟೀಸ್ ಜಾರಿ ಮಾಡಿದೆ.

ಕರ್ನಾಟಕ ಅಬಕಾರಿ ಕಾಯಿದೆ ಕಲಂ 14 (2) ಪ್ರಕಾರ ಮಿತಿಗಿಂತ ಕಡಿಮೆ ಮದ್ಯ ಮಾರಾಟ ಮಾಡಿದರೆ ಪ್ರತಿ ಲೀಟರಿಗೆ ನೂರು ರೂಪಾಯಿ ದಂಡ ವಿಧಿಸುವ ಅವಕಾಶವಿತ್ತು. ಬಾರ್ ಮಾಲೀಕರು ಪ್ರತಿ ತಿಂಗಳು ಕನಿಷ್ಟ 468 ಲೀಟರ್ ಮದ್ಯ ಮಾರಾಟ ಮಾಡಬೇಕು. ಆದರೆ, 2003 ರಿಂದ ಜಾರಿಯಲ್ಲಿ ಇದ್ದ ಈ ಕಾಯಿದೆಯನ್ನು ಎರಡು ವರ್ಷಗಳ ಹಿಂದೆ ತೆಗೆದು ಹಾಕಲಾಯಿತು.

ಸರಕಾರ ಈಗ ಆ ಕಾಯಿದೆ ಜಾರಿಯಲ್ಲಿದ್ದ ಕಾಲದಲ್ಲಿ ದಂಡವನ್ನು ವಸೂಲು ಮಾಡದಿರುವುದರಿಂದ ಈಗ ವಸೂಲು ಮಾಡಲು ಮುಂದಾಗಿದೆ. ಈ ಕಾಯಿದೆ ಬಂದಾಗಲೇ ಬಾರ್ ಮಾಲೀಕರು ಇಂತಹ ನಿಯಮವನ್ನು ಪಾಲಿಸಲು ಅಸಾಧ್ಯ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಈಗ ದಂಡ ತೆರಲು ವಿಫಲರಾದರೆ ಜುಲೈ ತಿಂಗಳಲ್ಲಿ ಪರವಾನಗಿ ನವೀಕರಣ ಮಾಡಲಾಗುವುದಿಲ್ಲ ಎಂದು ಸರಕಾರ ಹೇಳಿದೆ. ಬಾರ್ ಮಾಲೀಕರು ಈ ಹಳೇ ದಂಡವನ್ನು ಪಾವತಿಸಲು ಹೋದರೆ ಅದು ಹಲವು ಲಕ್ಷ ರೂಪಾಯಿ ಆಗಲಿದ್ದು, ಭಾರೀ ಆರ್ಥಿಕ ಹೊರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಲಾಖೆ ನಿಯಮ ಪ್ರಕಾರ ದಂಡ ಸಂಗ್ರಹಿಸುತ್ತಿದೆ ಎನ್ನುತ್ತಾರೆ ಅಬಕಾರಿ ಆಯುಕ್ತ ಮಂಜನಾಥ್ ನಾಯಕ್. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾರ್ ಮಾಲೀಕರು ಅಹವಾಲು ಸಲ್ಲಿಸಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳೇ ಸೂಕ್ತ ಕ್ರಮಕೈಗೊಳ್ಳುವರು ಎಂದಿದ್ದಾರೆ ಅಬಕಾರಿ ಖಾತೆ ಹೊಂದಿರುವ ಮುಖ್ಯಮಂತ್ರಿ.