ಭಾರತದ ನಗದು ಕೊರತೆ ಸರ್ಕಾರವೇ ಸೃಷ್ಟಿಸಿದ ಸ್ಥಿತಿ

ಸಾಂದರ್ಭಿಕ ಚಿತ್ರ

ನಗದು ಕೊರತೆ ಹೀಗೆಯೇ ಮುಂದುವರೆದರೆ ಜನತೆಯ ತಾಳ್ಮೆ ಇರುವುದಿಲ್ಲ. ದಂಗೆಗಳಾಗುವ ಸಂಭವ ಇರುತ್ತದೆ.
…………………….
* ಸ್ನೇಹಾ ಭೂಪತಿ
ಭಾರತ ಸರ್ಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಎರಡು ತಿಂಗಳ ನಂತರ ಭಾರತದ ಅರ್ಥವ್ಯವಸ್ಥೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಉತ್ಪಾದನಾ ಕೈಗಾರಿಕೆಗಳು ಕುಸಿತ ಎದುರಿಸುತ್ತಿವೆ. ರಿಯಲ್ ಎಸ್ಟೇಟ್ ಮತ್ತು ಕಾರ್ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಕೃಷಿಕರು ಮತ್ತು ರೈತಾಪಿ ಸಮುದಾಯ, ಸಣ್ಣ ಅಂಗಡಿ ಮುಗ್ಗಟ್ಟುಗಳ ಮಾಲೀಕರು ಮತ್ತು ಇತರ ಭಾರತೀಯರು ನಗದು ಕೊರತೆಯಿಂದ ತಮ್ಮ ಜೀವನವೇ ದುಸ್ತರವಾಗಿದೆ ಎಂದು ಆರೋಪಿಸುತ್ತಾರೆ. ದೇಶದ ಅರ್ಥವ್ಯವಸ್ಥೆಯ ಶೇ 86ರಷ್ಟಿದ್ದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಹಠಾತ್ತನೆ ರದ್ದುಪಡಿಸಿದ ಮೋದಿ ಸರ್ಕಾರ ಡಿಸೆಂಬರ್ 30ರವರೆಗೂ ಜನರಿಗೆ ತಮ್ಮ ಬಳಿ ಇರುವ ಹಣವನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಅವಕಾಶ ನೀಡಿತ್ತು. ಕಪ್ಪುಹಣವನ್ನು ಅಕ್ರಮವಾಗಿ ಸಂಗ್ರಹಿಸಿರುವ ಜನರನ್ನು ಗುರುತಿಸಿ ಮಟ್ಟ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಸರ್ಕಾರ ತನ್ನ ಹೊಸ ನೀತಿಯನ್ನು ಜಾರಿಗೊಳಿಸಿದ ರೀತಿ ಭಯಾನಕವಾಗಿದೆ. ಅನುಷ್ಟಾನದಲ್ಲಿ ಪೂರ್ಣ ವಿಫಲವಾಗಿದೆ. ಸಾಕಷ್ಟು ಹೊಸ ನೋಟುಗಳನ್ನು ಮುಂಚಿತವಾಗಿಯೇ ಮುದ್ರಿಸದೆ ಇರುವುದರಿಂದ ನಗದು ಕೊರತೆ ಸೃಷ್ಟಿಯಾಗಿದೆ. ಸಣ್ಣಪುಟ್ಟ ಪಟ್ಟಣಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಗದು ಕೊರತೆ ಹೆಚ್ಚಾಗಿದೆ. ಬಳಕೆಯಲ್ಲಿರುವ ನಗದು ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ.
ಕೆಲವೇ ವಾರಗಳಲ್ಲಿ ಯಾವುದೇ ಅರ್ಥವ್ಯವಸ್ಥೆಯೂ ಜನಸಾಮಾನ್ಯರಿಗೆ ಈ ರೀತಿಯ ಸಂಕಷ್ಟವನ್ನು ಸೃಷ್ಟಿಸುವುದಿಲ್ಲ. ದೇಶದ ಶೇ 98ರಷ್ಟು ವ್ಯಾಪಾರ ವಹಿವಾಟು ನಗದು ರೂಪದಲ್ಲಿ ನಡೆಯುತ್ತಿದ್ದ ಭಾರತದಲ್ಲಿ ಇಂದು ಶೇ 86ರಷ್ಟು ನಗದು ರದ್ದಾಗಿರುವುದು ಅರ್ಥವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ನಗದು ರದ್ದತಿಯಿಂದ ಭ್ರಷ್ಟಾಚಾರ ಕಡಿಮೆಯಾಗಿದೆ ಎನ್ನಲು ಯಾವುದೇ ಪುರಾವೆ ಒದಗುತ್ತಿಲ್ಲ. ಬ್ಯಾಂಕುಗಳಲ್ಲಿ ಎರಡೂವರೆ ಲಕ್ಷ ರೂಪಾಯಿಗೂ ಹೆಚ್ಚು ಜಮಾ ಮಾಡುವವರು ತಾವು ಆ ಹಣದ ಮೇಲೆ ತೆರಿಗೆ ಪಾವತಿಸಿರುವುದಾಗಿ ದಾಖಲೆ ನೀಡಬೇಕು ಎಂದು ಸರ್ಕಾರ ಆದೇಶಿಸಿತ್ತು. ನಿಯಮದ ಮೂಲಕ ಕಪ್ಪು ಹಣವನ್ನು ಬ್ಯಾಂಕುಗಳಿಗೆ ಮರಳಿ ಬರುವಂತೆ ಮಾಡುವುದಾಗಿ ಸರ್ಕಾರ ಭಾವಿಸಿತ್ತು. ಆದರೂ ಬಹುಪಾಲು ಹಳೆಯ ನೋಟುಗಳು ಬ್ಯಾಂಕಿನಲ್ಲಿ ಜಮಾ ಆಗಿವೆ. ಹಾಗಾಗಿ ಭಾರತದ ಅರ್ಥವ್ಯವಸ್ಥೆಯಲ್ಲಿ ನಗದು ರೂಪದ ಕಪ್ಪುಹಣ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಥವಾ ತೆರಿಗೆ ವಂಚಿಸುವ ಧನಿಕರು ತಮ್ಮ ಅಪರಾಧದಿಂದ ತಪ್ಪಿಸಿಕೊಳ್ಳಲು ವಾಮಮಾರ್ಗಗಳನ್ನು ಅನುಸರಿಸಿರುವುದು ಸ್ಪಷ್ಟವಾಗುತ್ತದೆ. ಈ ಕೃತ್ಯದಲ್ಲಿ ಲೇವಾದೇವಿಗಾರರು ಕಪ್ಪುಹಣದ ವಾರಸುದಾರರಿಗೆ ನೆರವಾಗಿರುವ ಸಾಧ್ಯತೆಗಳಿವೆ. ಭಾರತದ ಬಹುಪಾಲು ಜನತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಈ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ಆದರೆ ನಗದು ಕೊರತೆ ಹೀಗೆಯೇ ಮುಂದುವರೆದರೆ ಜನತೆಯ ತಾಳ್ಮೆ ಇರುವುದಿಲ್ಲ. ದಂಗೆಗಳಾಗುವ ಸಂಭವ ಇರುತ್ತದೆ. ಮೇಲಾಗಿ ಸರ್ಕಾರದ ನೋಟು ರದ್ದತಿಯಿಂದ ಭ್ರಷ್ಟಾಚಾರವಾಗಲಿ ತೆರಿಗೆ ವಂಚನೆಯಾಗಲೀ ಕಡಿಮೆಯಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ.