ಪಡಿತರದಾರರು ಖದೀಮರೆಂಬ ರಾಜ್ಯ ಸರಕಾರದ ನೀತಿ

ಸಾಂದರ್ಭಿಕ ಚಿತ್ರ

ಪಡಿತರದಾರರು ಉಪ್ಪರಿಗೆಯಲ್ಲಿ ಕುಳಿತು ಸುಖ ಜೀವನ ನಡೆಸುವವರಲ್ಲ. ದುಡಿಮೆಗಾಗಿ ಅಲೆದಾಡುವ ಮತ್ತು ದುಡಿಮೆಯಿಂದ ಜೀವನ ನಿರ್ವಹಣೆ ಸಾಧ್ಯವಾಗದಂತಹ ಬಡಪಾಯಿಗಳೇ ತುಂಬಿರುವ ಒಂದು ವರ್ಗ.
ತಿಂಗಳಿಗೊಮ್ಮೆ ಅಂಗಡಿಗೆ ಬಂದು ಪಡಿತರ ಸಾಮಗ್ರಿ ಕೊಂಡು ಹೋಗುವವರು ಮೂರ್ನಾಲ್ಕು ಕಿಲೋಮೀಟರ್ ದೂರ ಕ್ರಮಿಸಿ ಬರುವವರು. ಸಾರ್ವಜನಿಕ ಬಸ್ ಮುಂತಾದ ವಾಹನಗಳಲ್ಲಿ ಈ ಸಾಮಗ್ರಿ ಕೊಂಡುಹೋಗಲು ಅಸಾಧ್ಯವಿರುವುದರಿಂದ ಆಸುಪಾಸಿನ ಮೂರ್ನಾಲ್ಕು ಮನೆಯವರು ಒಂದಾಗಿ ಆಟೋರಿಕ್ಷಾದಲ್ಲಿ ಹೋಗುವಂತದ್ದು ರೂಢಿಯಾಗಿದೆ. ಇದೊಂದು ಸಾಗಾಟವೆಚ್ಚವನ್ನು ಕಡಿಮೆ ಮಾಡಲು ಇವರು ಕಂಡುಕೊಂಡ ಅನಿವಾರ್ಯವಾದ ವ್ಯವಸ್ಥೆಯಾಗಿದೆ.
ಉಣ್ಣಲು ಯೋಗ್ಯವಾದ ಅಕ್ಕಿಯು ರೇಶನ್ ಅಂಗಡಿಗೆ ಬಂದಿರುವ ಸುದ್ದಿ ತಿಳಿದಾಕ್ಷಣ, ಪಡಕೊಳ್ಳಲಿರುವವರು ಶರವೇಗದಲ್ಲಿ ಬಂದು ಕ್ಯೂನಲ್ಲಿ ನಿಲ್ಲುತ್ತಾರೆ.
ದೇಶದಲ್ಲಿರುವ ಶೇ 35 ಅನಕ್ಷರಸ್ಥರು, ಶೇ 40 ಬಡವರೆಂದರೆ ಅದನ್ನು ತಿಳಿದುಕೊಳ್ಳಲು ಬೇರೆ ಯಾರನ್ನೂ ಹುಡುಕಿ ಹೊರಡುವ ಅವಶ್ಯಕತೆಯಿಲ್ಲ. ಅಂತವರ ನಡುವೆ ಡಿಜಿಟಲ್ ಇಂಡಿಯಾದ ಮಾದರಿಯನ್ನು ತೋರಿಸಿ ಕೊಡಲು ನಮ್ಮ ಆಳುವ ಪಕ್ಷದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪಡುವ ಪ್ರಯತ್ನ ಅಕ್ಷಮ್ಯವಾದುದು.
ಪಡಿತರ ಪಡೆಯುವವರನ್ನೋ, ವಿತರಕರನ್ನೋ ಕಳ್ಳ ಖದೀಮರೆಂದು ಭಾವಿಸಿ ಪತ್ತೆ ಕಾರ್ಯಕ್ಕಾಗಿ ಆಗಾಗ ನಿಯಮಗಳ ಬದಲಾವಣೆ ಮಾಡುತ್ತಿರುವ ಸರಕಾರದ ಕ್ರಮವು ಜನಸಾಮಾನ್ಯರಿಂದ ಹಿಡಿಶಾಪಕ್ಕೆ ತುತ್ತಾಗಿದೆ.
ಕಾರ್ಡ್ ಪಡೆಯಲು, ಆಧಾರ್ ಲಿಂಕ್ ಮಾಡಲು, ಕೂಪನ್ ಪಡೆಯಲು, ಕುಟುಂಬ ಸದಸ್ಯರ ಆಧಾರ್ ಮತ್ತು ಎಪಿಕ್ ನಂಬ್ರ ಲಿಂಕ್ ಮಾಡಲು ಹೀಗೆ ಹಲವಾರು ಬಾರಿ ಸರತಿ ಸಾಲಿನಲ್ಲಿ ನಿಲ್ಲಿಸಿ ತೃಪ್ತಿಯಾಗದೆ ಮತ್ತೊಮ್ಮೆ ಏನೇನೋ ಸಬೂಬು ನೀಡಿ ಪಡಿತರದಾರರನ್ನು ಬಿಸಿಲಿನಲ್ಲಿ ನಿಲ್ಲಿಸಿ ಹೆಣ ಕಾಯುವ ಕೆಲಸಕ್ಕೆ ಹಚ್ಚಲು ಸರಕಾರ ಪ್ರಯತ್ನಿಸಲು ಹೊರಟಿದೆ. ಆಹಾರ ಇಲಾಖೆಯಲ್ಲಿನ ಮುಖ್ಯ ಅಧಿಕಾರಿಯೊಬ್ಬರು ಈ ಹಿಂದೆ ಕಟ್ಟಡ ಕಾರ್ಮಿಕರ ಕ್ಷೇಮನಿಧಿ ಮಂಡಳಿಯಲ್ಲಿರುವಾಗ ಅದರ ಸದಸ್ಯರಿಗೆ ಸಿಗಲಿರುವ ಹಲವು ಸವಲತ್ತುಗಳಿಗೆ ವಿಪರೀತ ಶರತ್ತುಗಳನ್ನು ವಿಧಿಸುವ ಮೂಲಕ ನಿಯಮಗಳನ್ನು ಕಠಿಣಗೊಳಿಸಿದ್ದಾರೆ. ಇದರಿಂದಾಗಿ ಸವಲತ್ತುಗಳು ಕೈಗೆ ಸಿಗದಂತಾಗಿದೆ.
ಇದೀಗ ಪಡಿತರ ಇಲಾಖೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟು ಮುಂದಿನ ದಿನಗಳಲ್ಲಿ ಪಡಿತರ ವ್ಯವಸ್ಥೆಯನ್ನೇ ನಾಶಗೊಳಿಸುವ ಹುನ್ನಾರಕ್ಕೆ ಕೈ ಹಾಕಿದ್ದಾರೆ.
ಪಡಿತರ ವಿತರಣೆಯೆಂಬುದು ಸರಕಾರಕ್ಕಿರುವ ದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ ಕೂಡಾ ಆಗಿದೆ.
ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮತ್ತು ಪಡಿತರ ವ್ಯವಸ್ಥೆಯನ್ನೇ ಇನ್ನಿಲ್ಲದಂತೆ ಮಾಡುವ ಸಲುವಾಗಿ ನಗದು ವ್ಯವಸ್ಥೆಯನ್ನು ಜ್ಯಾರಿಗೊಳಿಸಲು ಆಹಾರ ಸಚಿವರನ್ನು ಮುಂದಿಟ್ಟು ಪ್ರಯತ್ನಗಳು ನಡೆಯುತ್ತಿದೆ. ಇದರ ಪ್ರಯೋಗಾರ್ಥವಾಗಿ ಆಹಾರ ಸಚಿವರ ಜಿಲ್ಲೆಯನ್ನೇ ಆಯ್ಕೆ ಮಾಡಿರುವುದು ವರದಿಯಾಗಿದೆ. ಇದೊಂದು ವಿಪರ್ಯಾಸ.
ಕೇಂದ್ರ ಸರಕಾರವು ಗ್ಯಾಸ್ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕು ಖಾತೆಗಳಿಗೆ ಜಮಾ ಮಾಡಲು ಹೊರಟು, ಇದೀಗ ಸಬ್ಸಿಡಿ ಹಣ ಬಾರದೆಯಿದ್ದರೂ ಯಾರನ್ನೂ ಕೇಳಲಾರದ ಸ್ಥಿತಿಗೆ ತಲುಪಿದೆ. ಪಡಿತರ ನಗದು ಕೂಡಾ ಇದೇ ಪರಿಸ್ಥಿತಿಗೆ ತಲುಪಿದರೆ ಅತಿಶಯೋಕ್ತಿಯಾಗದು.
ಗಾಂಧೀಜಿಯವರ ಕನ್ನಡಕವನ್ನು ತೋರಿಸಿ `ಸ್ವಚ್ಛ ಭಾರತ’ಗೆ ನಾಂದಿ ಹಾಡಿದ ಮೋದಿಯವರ ತಂಡವು ಮುಂದೊಂದು ದಿನ ಗಾಂಧೀಜಿಯವರನ್ನೇ ಚರಿತ್ರೆಯಿಂದ ದೂರಮಾಡಲು ಇಟ್ಟಿರುವ ದೂರದೃಷ್ಟಿಯೇ, ಪಡಿತರ ನಗದೀಕರಣದಲ್ಲೂ ಇರುವುದರಿಂದ ಆಹಾರ ಸಚಿವರು ಸ್ವಲ್ಪ ಯೋಚಿಸಿ ಮುಂದಡಿಯಿಡಬೇಕಾಗಿದೆ.
ಕೋಮುವಾದಿಗಳ ಕೈಯಿಂದ ಕಿತ್ತುಕೊಟ್ಟ ಅಧಿಕಾರವನ್ನು ಕಾಂಗ್ರೆಸಿಗರು ದುರುಪಯೋಗ ಪಡಿಸಿ ಅನ್ಯಾಯವೆಸಗಿದರೆ, ಮುಂದಿನ ಚುನಾವಣೆ ಸಂದರ್ಭದಲ್ಲಿ ಜನ ಸಾಮಾನ್ಯರು ಅಸಹಾಯಕ ಪರಿಸ್ಥಿತಿಯನ್ನೆದುರಿಸುವಂತಾಗಲಿದೆ.
ಈ ಮೂರುವರೆ ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಆಡಳಿತವು ಜನರನ್ನು ತನ್ನ ಹತ್ತಿರ ಮಾಡುವ ಕೆಲಸದಲ್ಲಿ ವಿಫಲವಾಗಿದೆ.
ಕೋಮುವಾದಿಗಳಿಂದ ಅಧಿಕಾರ ಕಿತ್ತುಕೊಂಡಿದ್ದರೂ ಇಡೀ ರಾಜ್ಯದಲ್ಲಿ ಮಾತ್ರ ಅವರದ್ದೇ ಕಾರುಬಾರು ಎದ್ದು ಕಾಣುವಂತಿದೆ.
ರಾಜ್ಯದ ಜನತೆ ಇದನ್ನೆಲ್ಲ ಕ್ಷಮಿಸುವುದಿಲ್ಲ ಎಂಬುದನ್ನು ಮನವರಿಕೆ ಮಾಡಿ ಮುಂದುವರಿದರೆ ಕ್ಷೇಮ

  • ಬಾಬು ಪಿಲಾರ್  ತೊಕ್ಕೊಟ್ಟು