ಅಕ್ರಮ ಫ್ಲೆಕ್ಸ್, ಬಂಟಿಂಗ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರದ ಚಿಂತನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಟಿಪಳ್ಳದಲ್ಲಿ ಇತ್ತೀಚೆಗೆ ನಡೆದ ದೀಪಕ್ ರಾವ್ ಹತ್ಯೆ ಹಾಗೂ ಕಳೆದ ವರ್ಷದ ಜೂನ್ ತಿಂಗಳಲ್ಲಿ  ಬಂಟ್ವಾಳದಲ್ಲಿ ನಡೆದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣಗಳ ಹಿಂದೆ ಬಂಟಿಂಗ್ ಹಾಗೂ ಬ್ಯಾನರ್ ಕಟ್ಟುವ ವಿಚಾರದಲ್ಲಿ ಉಂಟಾದ ಕಲಹಗಳು ಪ್ರಮುಖ ಕಾರಣವಾಗಿದೆ ಎಂದೇ ನಂಬಲಾಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರಕಾರವು ರಾಜಕೀಯ ಪಕ್ಷಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಅಳವಡಿಸುವ ಬಂಟಿಂಗ್ ಹಾಗೂ ಫ್ಲೆಕ್ಸ್ ಬ್ಯಾನರುಗಳಿಗೆ ಸಂಬಂಧ ಪಟ್ಟಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಎರಡೂ ಕೊಲೆ ಪ್ರಕರಣಗಳು ಸಾಕಷ್ಟು ಉದ್ವಿಗ್ನತೆಯ ವಾತಾವರಣ ಸೃಷ್ಟಿಸಿದ್ದರಿಂದ ಫ್ಲೆಕ್ಸ್, ಬಂಟಿಂಗ್, ಬ್ಯಾನರ್ ಅಳವಡಿಕೆಯ ಬಗೆಗಿರುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ ಇಂತಹ ಘಟನೆಗಳನ್ನು ತಡೆಯಬಹುದು. ಈ  ಬಗ್ಗೆ ಒಂದು ಸೂಕ್ತ ನಿರ್ಧಾರವನ್ನು ಸದ್ಯದಲ್ಲಿಯೇ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಹೇಳುತ್ತಾರೆ.

ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ತಾನು ಯಾವತ್ತೂ ವಿರೋಧ ಎಂದು ಹೇಳುವ ಖಾದರ್, “ತಮ್ಮ ಕ್ಷೇತ್ರದಲ್ಲಿ ಒಮ್ಮೆ ತಮ್ಮ ಚಿತ್ರವಿರುವ ಫ್ಲೆಕ್ಸ್ ಬ್ಯಾನರನ್ನು ನೋಡಿದ ನಂತರ ಅದನ್ನು ತೆರವುಗೊಳಿಸುವಂತೆ ಉಳ್ಳಾಲ ಸ್ಥಳೀಯಾಡಳಿತಕ್ಕೆ ತಿಳಿಸಿದ್ದೆ ಹಾಗೂ ಕಾರ್ಯಕರ್ತರಿಗೆ ಇಂತಹ ಬ್ಯಾನರ್ ಅಳವಡಿಸದಂತೆ ಹೇಳಿದ್ದೇನೆ” ಎಂದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಶಶಿಧರ್ ಹೆಮ್ಮಾಡಿ ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮನವಿ ಸಲ್ಲಿಸಿ ಅಕ್ರಮ ಬ್ಯಾನರ್, ಬಂಟಿಂಗ್ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇಂತಹ ಬ್ಯಾನರುಗಳನ್ನು ಅಳವಡಿಸುವ ಸಂಘ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರಲ್ಲದೆ ಸರಕಾರದ ಮಾರ್ಚ್ 11, 2016ರ ಸುತ್ತೋಲೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್ ಹಾಗೂ ಫ್ಲೆಕ್ಸ್ ಬ್ಯಾನರುಗಳನ್ನೂ ನಿಷೇಧಿಸಿರುವ ಬಗ್ಗೆಯೂ ಅವರ ಗಮನ ಸೆಳೆದಿದ್ದಾರೆ.

LEAVE A REPLY