ಮಠಗಳು, ಅವುಗಳ ನಿಯಂತ್ರಣದಲ್ಲಿರುವ ದೇವಳ ಮುಜರಾಯಿ ವ್ಯಾಪ್ತಿಗೆ ತರಲು ಸರಕಾರದ ಚಿಂತನೆ

ಕಾಯಿದೆಗೆ ಸಮಗ್ರ ತಿದ್ದುಪಡಿ ತರಲು 7 ಸದಸ್ಯರ ಸಮಿತಿ ಕಾರ್ಯತತ್ಪರ

ಬೆಂಗಳೂರು : ಮುಜರಾಯಿ ಕಾಯಿದೆಗೆ ಸಮಗ್ರ ತಿದ್ದುಪಡಿ ತರುವ ಉದ್ದೇಶ ಸರಕಾರಕ್ಕಿದ್ದು ಇದೇನಾದರೂ ಕಾರ್ಯಗತಗೊಂಡಿದ್ದೇ ಆದಲ್ಲಿ ಹಲವಾರು ಧಾರ್ಮಿಕ ಮಠಗಳು ಹಾಗೂ ಅವುಗಳ ಅಧೀನದಲ್ಲಿರುವ ದೇವಳಗಳು ಸರಕಾರದ ನಿಯಂತ್ರಣಕ್ಕೊಳಪಡುವ ಸಾಧ್ಯತೆಯಿದೆ.

ಸರಕಾರ ರಚಿಸಿರುವ ಏಳು ಸದಸ್ಯರ ಸಮಿತಿಯು ಮುಜರಾಯಿ ಕಾಯಿದೆ ಎಂದೇ ಕರೆಯಲ್ಪಡುವ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕರಡು ತಯಾರಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದೆ.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷದ್ ಅಧ್ಯಕ್ಷರೂ, ವಕೀಲರೂ ಆಗಿರುವ ಎನ್ ಕೆ ಜಗನ್ನಿವಾಸ್ ರಾವ್ ನೇತೃತ್ವದ ಸಮಿತಿ ಈಗಾಗಲೇ ಮೂರು ಬಾರಿ ಸಭೆ ಸೇರಿದ್ದು, ಇನೊಂದು ತಿಂಗಳೊಳಗಾಗಿ ಕರಡು ಸಿದ್ಧಪಡಿಸಲಿದೆ. ಮಠಗಳು ಹಾಗೂ ಅವುಗಳ ನಿಯಂತ್ರಣದಲ್ಲಿರುವ ದೇವಳಗಳನ್ನು ಈ ಕಾಯಿದೆಯ ವ್ಯಾಪ್ತಿಗೆ ಸೇರಿಸುವ ವಿಚಾರವನ್ನೂ ಸಮಿತಿ ಪರಿಗಣಿಸುತ್ತಿದೆ.

“ತಿದ್ದುಪಡಿ ಮಸೂದೆಯ ಕರಡು ತಯಾರಿ ಇನ್ನೂ ಆರಂಭಿಕ ಹಂತದಲ್ಲಿದೆ, 1997ರ ಹಿಂದೂ ದತ್ತಿ ಕಾಯಿದೆಯ ಸಮಗ್ರ ತಿದ್ದುಪಡಿಯೇ ಇದರ ಉದ್ದೇಶ. ಇದಕ್ಕಾಗಿ ದೇವಳಗಳ ಆಡಳಿತ ವರ್ಗ, ಸಿಬ್ಬಂದಿ, ಅರ್ಚಕರು ಹಾಗೂ ಭಕ್ತಾದಿಗಳ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗುವುದು. ಆಂಧ್ರ ಪ್ರದೇಶ, ತಮಿಳುನಾಡು ಹಾಗೂ

ಕೇರಳದಲ್ಲಿ ಈ ಪ್ರಕ್ರಿಯೆಯನ್ನು ಹೇಗೆ ಸುಗಮವಾಗಿಸಲಾಗಿದೆಯೆಂಬುದನ್ನು ತಿಳಿಯುವ ಪ್ರಯತ್ನ ನಡೆಸಲಾಗುವುದು. ಸರಕಾರದ ಹಸ್ತಕ್ಷೇಪ ಕಡಿಮೆಗೊಳಿಸಿ ಸ್ಥಳೀಯ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದೂ ನಮ್ಮ ಉದ್ದೇಶಗಳಲ್ಲೊಂದು” ಎಂದು ಜಗನ್ನಿವಾಸ್ ರಾವ್ ತಿಳಿಸಿದ್ದಾರೆ.

ಮಠಗಳು ಹಾಗೂ ಅವುಗಳ ನಿಯಂತ್ರಣದಲ್ಲಿರುವ ದೇವಳಗಳ ಹೊರತಾಗಿ ಜೈನರು, ಬೌದ್ಧ ಧರ್ಮೀಯರು ಹಾಗೂ ಸಿಕ್ಖರನ್ನು “ಹಿಂದೂ” ಪದದ ವ್ಯಾಖ್ಯಾನದಿಂದ ಈ ಕಾಯಿದೆ ಹೊರಗಿಟ್ಟಿರುವುದು ಕಾನೂನುಬಾಹಿರ ಹಾಗೂ ತಾರತಮ್ಯಕಾರಿ ಎಂದು ಬಣ್ಣಿಸಿ ಈ ಕಾಯಿದೆಗೆ 2011 ಹಾಗೂ 2012ರಲ್ಲಿ ಮಾಡಲಾದ ತಿದ್ದುಪಡಿಗಳನ್ನು ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ 2015ರಲ್ಲಿ ರದ್ದುಗೊಳಿಸಿತ್ತಾದರೂ ಹೈಕೋರ್ಟ್ ತೀರ್ಪಿನ ಕೆಲವೊಂದು ಅಂಶಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮಾಡಿದ್ದ ಟಿಪ್ಪಣಿಗಳ ಆಧಾರದಲ್ಲಿ ಈ ಕಾಯಿದೆಯನ್ನು ಉತ್ತಮಗೊಳಿಸಿ ಅದರ ಎಲ್ಲಾ  ಲೋಪಗಳನ್ನು ನಿವಾರಿಸುವ ಯತ್ನ ನಡೆಸಲಾಗುವುದು ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಗದ್ದುಗೆಗಳನ್ನು ಮಠಗಳಿಗೆ ಹಿಂದಿರುಗಿಸಲಿರುವ ಇಲಾಖೆ ತನ್ನ ಸುಪರ್ದಿಯಲ್ಲಿರುವ ವಿವಿಧ ಪೀಠಾಧಿಪತಿಗಳ ಗದ್ದುಗೆಯನ್ನು ಸಂಬಂಧಿತ ಮಠಗಳಿಗೆ ಹಸ್ತಾಂತರಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಅಂತೆಯೇ `ಸಿ’ ವಿಭಾಗದ ದೇವಳಗಳನ್ನು ಅವುಗಳ ಅನುವಂಶಿಕ ಅರ್ಚಕರ ಕುಟುಂಬಗಳಿಗೇ ಸರಕಾರ ಹಸ್ತಾಂತರಿಸಲಿದೆ. ಈಗಾಗಲೇ ಇಲಾಖೆ ಇಂತಹ ದೇವಳಗಳಿಂದ 70 ಅರ್ಜಿಗಳನ್ನು ಪಡೆದಿದೆ. ಇಂತಹ ದೇವಳಗಳ ಪಟ್ಟಿಯನ್ನು ಸಲ್ಲಿಸುವಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.