80 ಸಾವಿರ ರೂ ಲಂಚ ಪಡೆಯವಾಗ ಎಸಿಬಿ ಬಲೆಗೆ ಬಿದ್ದ ಸರಕಾರಿ ಅಧಿಕಾರಿ

ನಮ್ಮ ಪ್ರತಿನಿಧಿ ವರದಿ

ಮಡಿಕೇರಿ : ವಸತಿಗೃಹ ದುರಸ್ತಿ ಕಾಮಗಾರಿಯ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಂದ 80 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗನ್ನಾಥ ಜಾಧವ್ ತನ್ನ ನಿವಾಸದಲ್ಲೇ  ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಜಗನ್ನಾಥ ಜಾಧವಗೆ ಬೆಳಗ್ಗೆ ನಗರದ ಸುದರ್ಶನ ವೃತ್ತದ ಬಳಿಯ ಅವರ ವಸತಿಗೃಹದಲ್ಲ್ಲಿ ಕ್ಲಾಸ್ ಒನ್ ಲೋಕೋಪಯೋಗಿ ಗುತ್ತಿಗೆದಾರ ಯತೀಶ್ ಲಂಚದ ಹಣ ನೀಡುವ ಸಂದರ್ಭ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು. ಸಾಕ್ಷ್ಯ ಸಹಿತ ಲೋಕೋಪಯೋಗಿ ಇಲಾಖಾ  ಕಾರ್ಯಪಾಲಕ ಅಭಿಯಂತರ ಜಗನ್ನಾಥ ಯಾದವ್ ಅವರನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು.

acb

ನಗರದ ನ್ಯೂಎಕ್ಸಟೆನ್ಶನ್ ನಿವಾಸಿ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ಯತೀಶ್ ಅವರು ವಾರ್ತಾ ಇಲಾಖೆಯ ಸಮೀಪ ಪಿಡಬ್ಲ್ಯುಡಿಯ ಆರು ವಸತಿ ಗೃಹಗಳ ದುರಸ್ತಿಯ 23 ಲಕ್ಷ ರೂ ಮೊತ್ತದ ಟೆಂಡರ್‍ನ್ನು ಪಡೆದುಕೊಂಡಿದ್ದರು. ಕಾಮಗಾರಿಯ ಅಗ್ರಿಮೆಂಟಿಗಾಗಿ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಜಗನ್ನಾಥ್ ಯಾದವ್ 4 ಲಕ್ಷ ರೂ ಬೇಡಿಕೆಯನ್ನು ಮುಂದಿಟ್ಟಿದ್ದರು. ಅಲ್ಲದೆ ಈ ಹಣಕ್ಕಾಗಿ ಕಳೆದ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದರು ಎಂದು ಯತೀಶ್ ಆರೋಪಿಸಿದ್ದಾರೆ.

ಲಂಚಕ್ಕಾಗಿ ಬೇಡಿಕೆ ಮುಂದಿಟ್ಟಿರುವ ಬಗ್ಗೆ ಯತೀಶ್ ಮೈಸೂರು ಎಸಿಬಿಗೆ ಬುಧವಾರ ಸಂಜೆ ದೂರನ್ನು ಸಲ್ಲಿಸಿದ್ದರು.

ಬಂಧಿತ ಅಧಿಕಾರಿಯನ್ನು ಮೈಸೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಹೇಳಿದ್ದಾರೆ.