ಜನರ ದಿಕ್ಕು ತಪ್ಪಿಸುತ್ತಿರುವ ಸರ್ಕಾರ

ಜನರನ್ನು ಸದಾ ದಿಕ್ಕು ತಪ್ಪಿಸುವ ರೀತಿಯಲ್ಲೇ ತನ್ನ ಆಡಳಿತವನ್ನು ನಡೆಸುತ್ತಿರುವ ಮೋದಿ ಸರ್ಕಾರದ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ. ದಿಕ್ಕುತಪ್ಪಿಸುವ ಮೂಲಕ ಆಡಳಿತ ನಡೆಸುವುದರಿಂದ ದೀರ್ಘಕಾಲಾವಧಿಯಲ್ಲಿ ದೇಶ ಬೃಹತ್ ಆರ್ಥಿಕ ಸುನಾಮಿಯನ್ನೇ ಎದುರಿಸಲಿದೆ.

ಯುಪಿಎ ಆಡಳಿತದ ಎರಡನೆ ಪಾಳಿಯಲ್ಲಿ ದೇಶದÀ ಬಹುತೇಕ ಮಾಧ್ಯಮಗಳು ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು ನ್ಯಾಯಯುತವೇ ಆಗಿತ್ತು. ಎರಡೂವರೆ ವರ್ಷದ ನಂತರ ನರೇಂದ್ರ ಮೋದಿ ಸರ್ಕಾರ ಇದೇ ಆತಂಕ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಸನ್ನಿವೇಶ ಏರ್ಪಟ್ಟಿರುವಾಗ ಮಾಧ್ಯಮಗಳ ಧೋರಣೆ ಹೇಗಿರುತ್ತದೆ ? ದೇಶದ ಅರ್ಥಿಕ ಭವಿಷ್ಯದ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸುವ ಶೀರ್ಷಿಕೆಗಳೇಕೆ ಕಂಡುಬರುತ್ತಿಲ್ಲ ? ಒಂದು ವೇಳೆ ಕಂಡುಬಂದರೂ ಆರ್ಥಿಕ ಜಡತ್ವವೇ ರಾರಾಜಿಸುತ್ತದೆ. ಜಿಡಿಪಿ ಅಭಿವೃದ್ಧಿಯ ಬಗ್ಗೆ ಎಷ್ಟೇ ಅಬ್ಬರ ಕಂಡುಬಂದರೂ ಖಾಸಗಿ ಬಂಡವಾಳ ಹೂಡಿಕೆ ಒಂದಿನಿತೂ ಮುನ್ನಡೆ ಸಾಧಿಸಿಲ್ಲ. ಬೇರಾವುದೇ ಸನ್ನಿವೇಶದಲ್ಲಿ ಆರ್ಥಿಕ ಅಭಿವೃದ್ಧಿ ಈ ರೀತಿ ಜಡತ್ವ ಕಂಡಿದಲ್ಲಿ ದೇಶಾದ್ಯಂತ ಹುಯಿಲೆಬ್ಬಿಸಲಾಗುತ್ತಿತ್ತು.

ಭಾರತದಲ್ಲಿ ಪ್ರಭುತ್ವದ ನೆರವು ಇಲ್ಲದಿದ್ದರೂ ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಒಂದು ದಶಕದಲ್ಲಿ ಮೊದಲ ಬಾರಿಗೆ ಅನೇಕ ಯೋಜನೆಗಳಲ್ಲಿ ಖಾಸಗಿ ಬಂಡವಾಳಕ್ಕಿಂತಲೂ ಸಾರ್ವಜನಿಕ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದೇಶದ ಆರ್ಥಿಕತೆ ಪ್ರಭುತ್ವವನ್ನೇ ಅವಲಂಬಿಸಿ ಮುನ್ನಡೆ ಸಾಧಿಸುತ್ತಿದೆ.  ಇದರಿಂದ ಹಲವಾರು ಸಾಂಸ್ಥಿಕ ಮತ್ತು ಹಣಕಾಸು ಬಿಕ್ಕಟ್ಟುಗಳು ಎದುರಾಗುತ್ತವೆ. ಈ ಕೆಲವು ಸಮಸ್ಯೆಗಳನ್ನು ಸರ್ಕಾರ ಹಿಂದಿನ ಸರ್ಕಾರದಿಂದ ಬಳುವಳಿಯಾಗಿ ಪಡೆದಿದೆ.

ಆದಾಗ್ಯೂ ಕಡಿಮೆ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಕ್ಷೀಣಿಸುತ್ತಿರುವ ಉದ್ಯೋಗಾವಕಾಶಗಳು ದೇಶದಲ್ಲಿ ಅರ್ಥಿಕ ಆತಂಕವನ್ನು ಇಮ್ಮಡಿಗೊಳಿಸಬೇಕಿತ್ತು.

ತಮ್ಮ ಆಡಳಿತ ವ್ಯವಸ್ಥೆಯ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಮಥ್ರ್ಯ ಹೊಂದಿದ್ದಾರೆ ಎಂದು ಮೋದಿ ಸರ್ಕಾರದ ಬಗ್ಗೆ ಇದ್ದ ವಿಶ್ವಾಸ ಮತ್ತು ಮೆಚ್ಚುಗೆ ಅಮಾನ್ಯೀಕರಣದ ಕ್ರಮದಿಂದ ಸಂಪೂರ್ಣ ಮಿಥ್ಯೆ ಎನಿಸಿಬಿಟ್ಟಿದೆ. ಇತರ ಕ್ಷೇತ್ರಗಳಲ್ಲೂ ಮೋದಿ ಸರ್ಕಾರ ಕಾರ್ಯನಿರ್ವಹಣಾ ಸಾಮಥ್ರ್ಯ ಮತ್ತು ಪ್ರತಿಭೆ ಪ್ರಶ್ನಾರ್ಹವಾಗಿಯೇ ಇದೆ.

ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಸರ್ಕಾರದ ಸಾಧನೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹ ಹೇಳಿದ್ದಾರೆ. ಮೂಲ ಸೌಕರ್ಯಗಳಲ್ಲಿ ಬಂಡವಾಳ ಕ್ರೋಢೀಕರಣ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ವಿದ್ಯುತ್ ಉತ್ಪಾದನೆ ಮತ್ತು ನವೀಕೃತ ವಿದ್ಯುತ್ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಿದ್ದರೂ ಯುಪಿಎ ಸರ್ಕಾರದ ಮಟ್ಟಿಗೆ ಸಾಧನೆ ಮಾಡಲಾಗಿಲ್ಲ. ಮೋದಿ ಸರ್ಕಾರದ ನಾಲ್ಕು ಪ್ರಮುಖ ಜನಪರ ಎನ್ನಬಹುದಾದ ಕಾರ್ಯಕ್ರಮಗಳಾದ ಸ್ವಚ್ಚ ಭಾರತ , ಶುದ್ಧ ಗಂಗಾ, ಸ್ಮಾರ್ಟ್ ಸಿಟಿ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳು ಬಹುಪಾಲು ವಿಫಲವಾಗಿವೆ. ಸ್ವಚ್ದ ಭಾರತ ಒಂದು ಕಟ್ಟಡ ನಿರ್ಮಾಣ ಯೋಜನೆಯಂತೆ ಪರ್ಯವಸಾನ ಕಂಡಿದೆ, ಶುದ್ಧ ಗಂಗಾ ಅಪ್ರಸ್ತುತವಾಗಿಬಿಟ್ಟಿದೆ. ಸ್ಮಾರ್ಟ್ ಸಿಟಿ ಯೋಜನೆ ಕೇವಲ ನರ್ಮ್ ಯೋಜನೆಯಡಿ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಸೀಮಿತಗೊಂಡಿದೆ. ಮೇಕ್ ಇನ್ ಇಂಡಿಯಾ ಕೇವಲ ಘೋಷಣೆಯಾಗಿ ಉಳಿದಿದೆ. ಈ ಎಲ್ಲ ಯೋಜನೆಗಳೂ ದೀರ್ಘಕಾಲಿಕವಾದವು. ಆದರೆ ಸರ್ಕಾರ ಈ ಯೋಜನೆಗಳನ್ನು ತನ್ನ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಂತೆ ಹಮ್ಮಿಕೊಂಡಿತ್ತು.  ಕಾರ್ಯಾಚರಣೆಯ ಬಗ್ಗೆ ಗಮನ ನೀಡಲೇ ಇಲ್ಲ. ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆಯ ಕೊರತೆ ಇರುವುದನ್ನು ಇದು ಸೂಚಿಸುತ್ತದೆ. ಜನ್ ಧನ್ ಮತ್ತು ಆಧಾರ್ ಯೋಜನೆಗಳು ಅದ್ಭುತ ಪ್ರಗತಿ ಸಾಧಿಸುತ್ತಿದ್ದರೂ ಒಟ್ಟಾರೆ ಸಾಧನೆ ನಿರೀಕ್ಷೆ ಮೀರಿದೆ ಎನ್ನಲಾಗುವುದಿಲ್ಲ..

ಮೂರನೆಯ ಅಂಶವೆಂದರೆ ಸರ್ಕಾರದ ಅತಿಯಾದ ಸರ್ವಾಧಿಕಾರಿ ಧೋರಣೆ. ಭಾರತಕ್ಕೆ ಕಾನೂನುಬದ್ಧತೆ ಅತ್ಯಗತ್ಯ. ಕಾನೂನಿಗೆ ಗೌರವ ತೋರುವುದೂ ಅಷ್ಟೇ ಅವಶ್ಯ. ಈ ಕಾನೂನು ಜಾರಿಗೊಳಿಸುವ ನಾಲ್ಕು ಸಂಸ್ಥೆಗಳೆಂದರೆ  ಪೊಲೀಸ್, ತನಿಖಾ ಸಂಸ್ಥೆಗಳು, ನ್ಯಾಯಾಂಗ ಮತ್ತು ನ್ಯಾಯವಿತರಣೆಯ ಸಂಸ್ಥೆಗಳು. ಈ ಸಂಸ್ಥೆಗಳಲ್ಲಿ ಏನಾದರೂ ಸುಧಾರಣೆಯಾಗಿದೆಯೇ ? ಖಂಡಿತವಾಗಿಯೂ ಇಲ್ಲ. ಮೋದಿ ಸರ್ಕಾರ ಮೂಲ ಧ್ಯೇಯ ಕಾನೂನು ನಿಯಮ ಪಾಲನೆಯನ್ನು ಬಿಗಿಗೊಳಿಸುವುದಲ್ಲ. ಎಪ್ಪತ್ತರದ ದಶಕದಲ್ಲಿದ್ದ ಧೋರಣೆಯನ್ನು ಪುಷ್ಟೀಕರಿಸುವುದು. ಅಂದರೆ ಸಮಾಜದಲ್ಲಿ ಕಾನೂನಿನ ಭೀತಿ ಮೂಡಿಸುವ ಮೂಲಕ ಜನಸಾಮಾನ್ಯರನ್ನು ನಿಯಂತ್ರಿಸುವುದು.

ಈ ಸರ್ಕಾರದ ರಕ್ಷಣಾ ಧೋರಣೆಗಳೂ ಸಹ ಪ್ರಶ್ನಾರ್ಹವೇ ಆಗಿವೆ. ದೇಶದ ಗಡಿ ನಿಯಂತ್ರಣ ರೇಖೆಯ ಬಳಿ ಈ ವರ್ಷ ಅತಿ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ಸರ್ಜಿಕಲ್ ದಾಳಿಯ ಹೊರತಾಗಿಯೂ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಮೋದಿ ಸರ್ಕಾರ ಅಮೆರಿಕದೊಡನೆ ಗಳಸ್ಯ ಕಂಠಸ್ಯ ಸ್ನೇಹ ಬೆಳೆಸಿ ಅಪ್ಪಿಕೊಳ್ಳಲು ಮುಂದಾಗುತ್ತಿದೆ. ಆದರೂ ಮಾಧ್ಯಮಗಳಲ್ಲಿ ಇದು ಹೆಡ್ ಲೈನ್ಸ್ ಆಗುತ್ತಿಲ್ಲ. ಜನರನ್ನು ಸದಾ ದಿಕ್ಕು ತಪ್ಪಿಸುವ ರೀತಿಯಲ್ಲೇ ತನ್ನ ಆಡಳಿತವನ್ನು ನಡೆಸುತ್ತಿರುವ ಮೋದಿ ಸರ್ಕಾರದ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ. ದಿಕ್ಕುತಪ್ಪಿಸುವ ಮೂಲಕ ಆಡಳಿತ ನಡೆಸುವುದರಿಂದ ದೀರ್ಘಕಾಲಾವಧಿಯಲ್ಲಿ ದೇಶ ಬೃಹತ್ ಆರ್ಥಿಕ ಸುನಾಮಿಯನ್ನೇ ಎದುರಿಸಲಿದೆ. ಈ ಭೀತಿಯನ್ನು ನಾವಿನ್ನು ಅಲಕ್ಷಿಸಲೂ ಆಗುವುದಿಲ್ಲ. (ಕೃಪೆ ಇಂಡಿಯನ್ ಎಕ್ಸ್‍ಪ್ರೆಸ್)