ಜಿಲ್ಲೆಯಲ್ಲಿ ಗೇರು ಸಂಗ್ರಹಕ್ಕೆ ಕ್ರಮ

ಸಚಿವೆ ಮರ್ಸಿಕುಟ್ಟಿಯಮ್ಮ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜಿಲ್ಲೆಯಲ್ಲಿ ಗೇರು ಉತ್ಪಾದನೆ, ಸಂಗ್ರಹ ಹಾಗೂ ಗೇರು ಕೃಷಿ ಕಾರ್ಮಿಕರ ಹಿತ ಕಾಪಾಡಲು ಅಗತ್ಯಕ್ರಮ ಕೈಗೊಳ್ಳಲು ಸರಕಾರ ಸಿದ್ಧವೆಂದು ಮೀನುಗಾರಿಕಾ ಹಾಗೂ ಗೇರುಕೈಗಾರಿಕಾ ಸಚಿವೆ ಜೆ ಮರ್ಸಿಕುಟ್ಟಿಯಮ್ಮ ಹೇಳಿದರು.
ತೋಟಗಾರಿಕಾ ಇಲಾಖೆಯ ತೋಟಗಳಲ್ಲಿ ಗೇರು ಸಂಗ್ರಹ ಸಂಬಂಧಪಟ್ಟಂತೆ ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಮಂಗಳವಾರ ನಡೆದ ಅವಲೋಕನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ತೋಟಗಾರಿಕಾ ಇಲಾಖೆ ವತಿಯಿಂದ ಹೊಸ ವೈಜ್ಞಾನಿಕ ಕ್ರಮಗಳ ಮೂಲಕ ಹೆಚ್ಚಿನ ಗೇರು ಉತ್ಪಾದನೆಗೆ ಶ್ರಮ ವಹಿಸಲಾಗಿದೆ. ಉತ್ಪಾದಿತ ಗೇರಿನ ಸಂಗ್ರಹಕ್ಕೆ ಬೇಕಾದ ಅಗತ್ಯ ಸಂಗ್ರಹಾಗಾರಗಳು ಜಿಲ್ಲೆಗೆ ಅಗತ್ಯವಾಗಿ ಬೇಕಿದೆ ಹಾಗೂ ಇವುಗಳನ್ನು ನಿರ್ಮಿಸಿ ಕೊಡಲಾಗುವುದು” ಎಂದರು
ಹಲವು ವ್ಯಾಪಾರಿ ಸಂಘಟನೆಗಳು ಕಾರ್ಮಿಕರ ಕ್ಷೇಮ ಕುರಿತಂತೆ ನೀಡಿದ ವರದಿಯನ್ನು ಅವರು ಸ್ವೀಕರಿಸಿದರು. ಈ ಹಿಂದೆ ಸಂಗ್ರಹಾಗಾರಗಳ ನಿರ್ಮಾಣಕ್ಕೆ ಗುತ್ತಿಗೆಯನ್ನು ನೀಡಲಾಗಿತ್ತಾದರೂ ಅವಧಿ ಮುಗಿದ ಕಾರಣ ಅವು ರದ್ದಾಗಿದೆ. ಹೊಸ ಗುತ್ತಿಗೆಯನ್ನು ನೀಡಿ ಗೇರು ಸಂಗ್ರಹಾಗಾರಗಳ ನಿರ್ಮಾಣವನ್ನು ಸಫಲಗೊಳಿಸಲಾಗುವುದು  ಎಂದು ಅವರು ತಿಳಿಸಿದರು.
ರಾಜಾಪುರ, ಕಮ್ಮಾಡಿ, ಪಾಣತ್ತೂರು ಮೊದಲಾದೆಡೆ ಗೇರು ಸಂಗ್ರಹಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿರುವ ಗೇರು ಎಸ್ಟೇಟುಗಳಲ್ಲಿ ಅನಧಿಕೃತ ವಾಹನ ಸಂಚಾರ ಹಾಗೂ ಮರಗಳ ಕಡಿಯುವಿಕೆಯನ್ನು ತಡೆಯಲು ಪೊಲಿಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಅನಧಿಕೃತ ಕಾರ್ಯಚಟುವಟಿಕೆಗಳನ್ನು ತಡೆಯಲು ಸಲಹಾ ಸಮಿತಿಯನ್ನು ರಚಿಸಲಾಗುವುದು  ಎಂದು ಅವರು ಹೇಳಿದರು.
ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷ, ಪೊಲಿಸ್ ವರಿಷ್ಠಾಧಿಕಾರಿ ಸಂಯೋಜಕರಾಗಿರುವರು. ಕೆಎಸ್‍ಡಿಸಿ, ತೋಟಗಾರಿಕಾ ಇಲಾಖೆ, ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳನ್ನು ಸಮಿತಿ ಸದಸ್ಯರನ್ನಾಗಿಸಲಾಗುವುದು ಎಂದರು.
ಸಭೆಯಲ್ಲಿ ಗೇರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಶಾಸಕರು ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಇದ್ದರು.