ಮಣಿಪಾಲ ವಾರ್ಸಿಟಿಯಿಂದ ಸರ್ಕಾರಿ ಜಾಗ ಒತ್ತುವರಿ

ಕ್ರಮಕ್ಕೆ ಸರಳೇಬೆಟ್ಟು ಜನರ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರಸಭಾ ವ್ಯಾಪ್ತಿಯ ಸರಳೇಬೆಟ್ಟು ವಾರ್ಡಿನ ಮಣಿಪಾಲ ಡೀಸಿ ಕಚೇರಿ ಬಳಿ ವಿಜಯನಗರ ಕೋಡಿ ಪ್ರದೇಶಕ್ಕೆ ಸಂಚರಿಸುವ ನಗರಸಭೆಗೆ ಸೇರಿದ ಸರಕಾರಿ ರಸ್ತೆಯ ಜಾಗವನ್ನು ಮಣಿಪಾಲ ಯುನಿರ್ವಸಿಟಿ(ಮಾಹೆ)ಯು ಅತಿಕ್ರಿಮಿಸಿಕೊಂಡು ಸಿಮೆಂಟ್ ಬ್ಲಾಕಿನಲ್ಲಿ ಆವರಣಗೋಡೆಯನ್ನು ನಗರಸಭೆಯ ಪರವಾನಿಗೆ ಇಲ್ಲದೇ, ರಾಜಾರೋಷವಾಗಿ ನಿರ್ಮಿಸುತ್ತಿರುವುದರ ವಿರುದ್ಧ ಸರಳೇಬೆಟ್ಟು ವಾರ್ಡಿನ ವಿಜಯನಗರ ಕೋಡಿ ನಿವಾಸಿಗಳಿಂದ ಅಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಸರಳೇಬೆಟ್ಟು ವಾರ್ಡಿನ ಕಾಂಗ್ರೆಸ್ ನಗರಸಭಾ ಸದಸ್ಯೆ ಜೋತಿ

ನಾಯ್ಕ್ ಹಾಗೂ ಸ್ಥಳೀಯ ನಿವಾಸಿಗಳು ಈ ಹಿಂದೆ ನಗರಸಭೆಗೆ ದೂರು ನೀಡಿ, ರಸ್ತೆ ಜಾಗವನ್ನು ಅತಿಕ್ರಮಿಸಿಕೊಂಡು, ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಆವರಣಗೋಡೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಅದೇ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಸ್ಥಳಕ್ಕೆ ಬಂದ ನಗರಸಭಾ ಅಧಿಕಾರಿಗಳು ಆವರಣಗೋಡೆ ಕಾಮಗಾರಿ ನಡೆಸದಂತೆ ಮಾಹೆಗೆ ನೋಟಿಸ್ ನೀಡಿದ್ದರು. ಆರು ತಿಂಗಳ ಕಾಲ ಸ್ಥಗಿತಗೊಂಡಿದ್ದ ಆವರಣಗೋಡೆ ಕಾಮಗಾರಿ ಕೆಲ ದಿನಗಳಿಂದ ಮತ್ತೆ ರಾಜಾರೋಷವಾಗಿ ಆರಂಭವಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಾಹೆಯು ರಸ್ತೆ ಜಾಗವನ್ನು ಅತಿಕ್ರಮಿಸಿಕೊಂಡು ಆವರಣಗೋಡೆ ಕಾಮಗಾರಿ ನಡೆಸುತ್ತಿರುವುದರಿಂದ ಮಳೆ ನೀರು ಹರಿಯಲು ಚರಂಡಿ ಇಲ್ಲವಾಗಿದೆ. ಆವರಣಗೋಡೆ ಕಾಮಗಾರಿ ವೇಳೆ ಈ ಪ್ರದೇಶದಲ್ಲಿದ್ದ ಮಾರ್ಗಸೂಚಿ ನಾಮಫಲಕವನ್ನು ಧ್ವಂಸಗೊಳಿಸಲಾಗಿದೆ. ವಿಜಯ ನಗರ ಕೋಡಿ ಪ್ರದೇಶಕ್ಕೆ ಹೋಗಲು ಮಣಿಪಾಲ ಡೀಸಿ ಕಚೇರಿ ಬಳಿಯ ಮಣಿಪಾಲ ಕೆಎಂಸಿ ವಸತಿಗೃಹದ ಸಮೀಪ ನಗರಸಭೆ ರಸ್ತೆ ಇದ್ದು, ಈ ರಸ್ತೆಗೆ ಮಾಹೆಯು ಗೇಟ್ ಹಾಕಿದ್ದು, ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಿ, ದಿಗ್ಭಂಧನ ವಿಧಿಸಿದೆ. ವಿಜಯನಗರ ಕೋಡಿ ಪ್ರದೇಶದಲ್ಲಿ ಮರಾಠಿ ಸಮುದಾಯಕ್ಕೆ ಸೇರಿದ ನೂರಾರು ಮನೆಗಳಿದ್ದು, ಅಲ್ಲಿನ ನಿವಾಸಿಗಳು ಗೇಟ್ ಮೂಲಕವೇ ರಸ್ತೆಯಲ್ಲಿ ಸಂಚಾರಿಸಬೇಕಾದ ಪರಿಸ್ಥಿತಿ ನಿರ್ಮಿಸಲಾಗಿದೆ. ಇದನ್ನು ಪ್ರಶ್ನಿಸಿದರೆ ಮಾಹೆಯು ಗೂಂಡಾಗಳ ಮೂಲಕ ದಬ್ಬಾಳಿಕೆ ನಡೆಸುತ್ತದೆ. ಮಣಿಪಾಲ ಡೀಸಿ ಕಚೇರಿ ಬಳಿಯೇ ಈ ಅಕ್ರಮಗಳು ರಾಜಾರೋಷವಾಗಿ ನಡೆದರೆ, ಉಳಿದ ಕಡೆಗಳಲ್ಲಿ ಊಹಿಸಲಾಸಾಧ್ಯ” ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಹಾಗೂ ಚರಂಡಿ ಜಾಗವನ್ನು ಅತಿಕ್ರಮಿಸಿಕೊಂಡು, ನಗರಸಭೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಆವರಣಗೋಡೆ ಕಾಮಗಾರಿ ನಡೆಸುತ್ತಿರುವ ಮಾಹೆ ವಿರುದ್ಧ ಉಡುಪಿ ನಗರಸಭಾ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು, ಕಾಮಗಾರಿ ಸ್ಥಗಿತಗೊಳಿಸಬೇಕೆಂದು ವಿಜಯನಗರ ಕೋಡಿ ನಿವಾಸಿಗಳು ಆಗ್ರಹಿಸಿದ್ದಾರೆ.