ರಾಜ್ಯ ಸರ್ಕಾರ ಪತ್ರಕರ್ತರಿಗೆ ಯೋಜನೆ ರೂಪಿಸಲು ವಿಫಲ

ಸಭೆಯಲ್ಲಿ ಎನ್ ರಾಜು ಮಾತಾಡಿದರು

ಸಂಘದ ಅಧ್ಯಕ್ಷ ಎನ್ ರಾಜು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : “ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಹಿಂದಿನ ಎಲ್ಲಾ ಸರಕಾರಗಳು ಪತ್ರಕರ್ತರಿಗೆ ಸಮರ್ಪಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ” ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್ ರಾಜು ಹೇಳಿದರು.

ಪಟ್ಟಣದ ಗುರು ಸುಧೀಂದ್ರ ಕಾಲೇಜಿನ ಮೈದಾನದಲ್ಲಿ ಶನಿವಾರ ರಾತ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಹೊಸದಾಗಿ ರಚನೆಯಾಗಿರುವ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಪತ್ರಕರ್ತರಿಗೆ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಪತ್ರಕರ್ತರಿಗೆ ಆರೋಗ್ಯ ಭದ್ರತೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕೊಡಿ  ಎಂದು ಹಲವು ವರ್ಷಗಳಿಂದ ಸಂಘದಿಂದ ಆಗ್ರಹಿಸುತ್ತಾ ಬಂದಿದ್ದರೂ ಸರಕಾರ ಈ ಬಗ್ಗೆ ಗಮನ ಹರಿಸಿಲ್ಲ. ಪತ್ರಿಕಾ ರಂಗ ಇಂದು ಪತ್ರಿಕೋದ್ಯಮವಾಗಿದೆ. ಸ್ಥಳೀಯ ಮಟ್ಟದ ಪತ್ರಿಕೆಗಳ ವರದಿಗಾರರು ಸಂಕಷ್ಟದಲ್ಲಿದ್ದು, ಯಾವುದೇ ಭದ್ರತೆ ಇಲ್ಲವಾಗಿದೆ. ಈ ಬಗ್ಗೆ ಸರಕಾರದ ಮೇಲೆ ಶಾಸಕರು ಒತ್ತಡ ಹೇರಿ ಪತ್ರಕರ್ತರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕು” ಎಂದ ಅವರು, “ರಾಜ್ಯದಲ್ಲೇ ಬೆಳ್ಳಿ ಹಬ್ಬ ಆಚರಿಸುತ್ತಿರುವ ಮೊದಲ ಪತ್ರಕರ್ತರ ಸಂಘ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಆಗಿದೆ. ಇದೊಂದು ಮಾದರಿ ಸಂಘವಾಗಿದೆ” ಎಂದರು.