ಕೋಟಿ ಚೆನ್ನಯ್ಯರ ಕಾರಣಿಕ ಕ್ಷೇತ್ರ ಪಡುಮಲೆ ಅಭಿವೃದ್ಧಿಗೆ ಸರಕಾರದ ಅನುದಾನ ಪೈಸೆಯೂ ಖರ್ಚಾಗಿಲ್ಲ

ಚುನಾವಣೆ ಸಮೀಪಿಸುತ್ತಿದ್ದಂತೆ ಹೌಹಾರುತ್ತಿರುವ ಜನಪ್ರತಿನಿಧಿಗಳು

* ವಿಶೇಷ ವರದಿ
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಕಟಿಸಿದ ಮೊದಲ ಬಜೆಟಿನಲ್ಲೇ ತುಳುನಾಡಿನ ವೀರರಾದ ಕೋಟಿ-ಚೆನ್ನಯರ ಹುಟ್ಟೂರು ಪುತ್ತೂರು ತಾಲೂಕಿನ ಪಡುಮಲೆ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಮಂಜೂರು ಮಾಡಿದ್ದು ಇದುವರೆಗೆ ಖರ್ಚಾಗಿಲ್ಲ.
ಅನುದಾನ ಬಿಡುಗಡೆಯಾಗಿ ಈಗ ನಾಲ್ಕು ವರ್ಷ ಆಗುತ್ತಿದ್ದಂತೆ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಡೆಮಲೆ ಅಭಿವೃದ್ಧಿಗಾಗಿ ಮಂಜೂರು ಮಾಡಿದ ಅನುದಾನ ವಿನಿಯೋಗ ಆಗಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಗರಂ ಆಗಿದ್ದರೆ, ಏನಾದರೂ ಮಾಡಲೇ ಬೇಕೆಂಬ ಹಂಬಲದಲ್ಲಿದ್ದಾರೆ ಸ್ಥಳೀಯ ಶಾಸಕಿ ಸಂಸದೀಯ ಕಾರ್ಯದರ್ಶಿ ಕೆ ಶಕುಂತಳಾ ಶೆಟ್ಟಿ.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಕಾರದಿಂದ ಬಿಡುಗಡೆಯಾದ ಐದು ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳು ನಡೆಯದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ, ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕಾಗಿ ಮಂಗಳೂರಿನಲ್ಲಿರುವ ಜಿಲ್ಲೆಯ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯುಕ್ತರನ್ನು ನೇಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಪಡುಮಲೆ ಅಭಿವೃದ್ಧಿಗಾಗಿ ಸರಕಾರ ಪಡುಮಲೆ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಿದೆ. ಅದರ ಕಚೇರಿ ಎಲ್ಲಿ, ಅಧಿಕಾರಿಗಳು ಯಾರು ಎಂಬುದನ್ನು ಯಾವುದಾದರೂ ಜ್ಯೋತಿಷ್ಯರಲ್ಲೇ ಕೇಳಬೇಕಾದೀತು. ಪಡುಮಲೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದ ಬಗ್ಗೆ ಸಚಿವರಾಗಲಿ, ಸಂಸದೀಯ ಕಾರ್ಯದರ್ಶಯಾಗಲು ಅಧಿಕೃತ ಘೋಷಣೆ ಮಾಡಿಲ್ಲ. ಅದು ಹಾಗಿರಲಿ, ಪಡುಮಲೆಯನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕೆಂಬ ಬಗ್ಗೆ ವಿಸ್ತೃತ ಚರ್ಚೆಯನ್ನಾಗಲಿ, ಕ್ರಿಯಾ ಯೋಜನೆಯನ್ನಾಗಲಿ ಸಿದ್ಧಪಡಿಸಲಾಗಿಲ್ಲ. ಈಗ ತರಾತುರಿ ಇರುವುದು ಹೇಗಾದರೆ ಮಾಡಿ ಸರಕಾರದ ಹಣ ಖರ್ಚು ಮಾಡಬೇಕೆಂಬುದು.
ಯಾವ ಇಲಾಖೆ ಪಡುಮಲೆಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಬೇಕೆಂಬ ಗೊಂದಲ ಕೂಡ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹೀಗೆ ಗೊಂದಲ ಇತ್ತು. ಅನುದಾನ ಮಾತ್ರ ಪುತ್ತೂರು ಸಹಾಯಕ ಆಯುಕ್ತರ ಅಕೌಂಟಿಗೆ ಜಮೆ ಆಗಿತ್ತು.
ನೂರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಕೋಟಿ ಚೆನ್ನಯರ ಕಾಲದ 42ಕ್ಕೂ ಹೆಚ್ಚು ಕುರುಹುಗಳು, ಸ್ಥಳ ವಿಶೇಷಗಳು ಪಡುಮಲೆಯಲ್ಲಿ ಹರಡಿವೆ. ಬಹುತೇಕ ಸ್ಥಳಗಳು ಖಾಸಗಿಯವರ ವಶದಲ್ಲಿವೆ.
ಚಾರಿತ್ರಿಕ ಇತಿಹಾಸ ಸಂಬಂಧಿಸಿದ ಸ್ಥಳಗಳು ಸರಕಾರದ ವಶದಲ್ಲಿರುವುದು ತೀರ ಕಡಿಮೆ. ಸರಕಾರಕ್ಕೆ ಒಳಪಟ್ಟ ಗೋಮಾಳಗಳು, ಅರಣ್ಯ ಪ್ರದೇಶ ಮತ್ತು ಇತರ ಜಮೀನುಗಳು ಸಾವಿರಾರು ಎಕರೆ ಇವೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಅಲ್ಲಿನ ಇತಿಹಾಸ ಪುರುಷರ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಿದ ಸ್ಥಳಗಳು ಸಾಕಷ್ಟಿವೆ. ಅವುಗಳಲ್ಲಿ ಕಾಗಿನೆಲೆ, ಕೂಡಲ ಸಂಗಮ, ಬಸವ ಕಲ್ಯಾಣ, ಕಿತ್ತೂರು ಇತ್ಯಾದಿ ಐತಿಹಾಸಿಕ ಸ್ಥಳಗಳಲ್ಲಿ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಿ ಅಭಿವೃದ್ಧಿ ಮಾಡಲಾಗಿದ್ದು, ಇವೆಲ್ಲವೂ ಕಂದಾಯ ಇಲಾಖೆಯ ಸುಪರ್ದಿಯಲ್ಲೇ ಇವೆ.
ಕೂಡಲ ಸಂಗಮ ಪ್ರಾಧಿಕಾರ ಸ್ಥಾಪಿಸಿದಾಗ ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಅವರು 20 ಕೋಟಿ ರೂಪಾಯಿ ಅನುದಾನವನ್ನು ಅಂದಿನ ಜಿಲ್ಲಾಧಿಕಾರಿ ಜಾಮಧಾರ್ ಅವರಿಗೆ ನೀಡಿದ್ದರು. ಅಲ್ಪ ಸಮಯದಲ್ಲೇ ಕೂಡಲ ಸಂಗಮ ಅಭಿವೃದ್ಧಿಯಾಗಿತ್ತು. ಪಡುಮಲೆ ವಿಚಾರದಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮಹತ್ವದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದು ಕೇವಲ ವೀರ ಪುರುಷರಾದ ಕೋಟಿ ಚೆನ್ನಯ ಮತ್ತವರ ತಾಯಿಗೆ ಮಾಡುವ ದ್ರೋಹ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮಾಡುವ ದ್ರೋಹ ಆಗುತ್ತದೆ.
ಐತಿಹಾಸಿಕ ಕಾರಣಕ್ಕಾಗಿ ಮಾತ್ರವಲ್ಲದೆ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗಾವಕಾಶದ ದೃಷ್ಟಿಯಲ್ಲಿ ಪಡುಮಲೆ ಅಭಿವೃದ್ಧಿ ಆಗಬೇಕಾಗಿತ್ತು. ಹಚ್ಚ ಹಸಿರು ಪರಿಸರದ ನಡುವೆ ಕುಗ್ರಾಮದಂತಿರುವ ಪಡುಮಲೆ ಪ್ರದೇಶ ಅಭಿವೃದ್ಧಿ ಆದಾಗ ಇಲ್ಲಿನ ಗ್ರಾಮಸ್ಥರಿಗೆ ಮಾತ್ರವಲ್ಲದೆ ಇತರರಿಗೂ ಪ್ರಯೋಜನ ಆಗುವುದು. ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಜಿಲ್ಲೆಯಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯವೊಂದು ಕುಂಠಿತವಾಗಿದೆ.
ಅಂದಾಜು 450 ವರ್ಷಗಳ ಹಿಂದಿನ ಕೋಟಿ ಚೆನ್ನಯರ ಕಾಲಘಟ್ಟದ ನಾನಾ ಕುರುಹುಗಳು ಪಡುಮಲೆ ಪರಿಸರದಲ್ಲಿವೆ. ಈ ಎಲ್ಲ ಭಾಗಗಳು ಅಭಿವೃದ್ಧಿ ಆಗಬೇಕಾದರೆ ಎಲ್ಲೆಲ್ಲಿ ಏನೇನು ಆಗಬೇಕು ಮತ್ತು ಅದಕ್ಕೆ ಎಷ್ಟು ಅನುದಾನ ಬೇಕು ಎಂಬುದರ ಸ್ಪಷ್ಟ ಚಿತ್ರಣ ಬೇಕಾಗಿದೆ. ಆದರೆ, ಅಂತಹ ಪ್ರಯತ್ನ ಇದುವರೆಗೆ ನಡೆಸಲಾಗಿಲ್ಲ. ಇದಕ್ಕಾಗಿ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲು ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ.
ಪಡುಮಲೆಯಲ್ಲಿ ಒಂದೆಡೆ ಬಿಲ್ಲವ ಸಮುದಾಯವರು ಕೋಟಿ ಚೆನ್ನಯರ ಗರಡಿ ನಿರ್ಮಿಸಲು ತೊಡಗಿರುವುದು, ಈ ಕಾರ್ಯದಲ್ಲಿ ಬಿಲ್ಲವ ಸಮುದಾಯದ ಕೆಲವು ಮುಖಂಡರು ಕೈ ಜೋಡಿಸಿರುವುದು ಮುಂಬರುವ ಚುನಾವಣೆಗಳಲ್ಲಿ ತೊಂದರೆ ಆಗಬಹುದೇ ಎಂಬ ಸಂದೇಹ ಈ ಜನಪ್ರತಿನಿಧಿಗಳಲ್ಲಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಖ್ಯೆ ಪ್ರಾಬಲ್ಯವಿರುವ ಸಮುದಾಯ ಬಿಲ್ಲವರದಾಗಿದ್ದು, ಮುಖ್ಯಮಂತ್ರಿ ಅನುದಾನ ನೀಡಿದರೂ ಜಿಲ್ಲೆಯಲ್ಲಿ ಹಣ ಖರ್ಚಾಗದಿದ್ದರೆ ಅದಕ್ಕೆ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಹೊಣೆಗಾರರಾಗುತ್ತಾರೆ. ಈ ಹಿನ್ನೆಲೆಯಲ್ಲೇ ಬಿಲ್ಲವರ ಮತ ನಿರ್ಣಾಯಕ ಆಗಿರುವುದರಿಂದ ಈಗ ಪಡುಮಲೆ ಅಭಿವೃದ್ಧಿ ಇನ್ನಿಲ್ಲದ ತರಾತುರಿ ಆರಂಭವಾಗಿದೆ.
ಸದ್ಯ ಸರಕಾರ ನೀಡಿರುವ ಅನುದಾನವನ್ನು ಮುಗಿಸುವುದೇ ಪ್ರಮುಖ ಉದ್ದೇಶದಂತೆ ಕಂಡುಬರುತ್ತಿದ್ದು, ಅದಕ್ಕಾಗಿ ಹೊಸದಾಗಿ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲಾಗುತ್ತಿದೆ. ವಿಶೇಷ ಅಧಿಕಾರಿಯನ್ನು ನೇಮಿಸುತ್ತಿದ್ದರೆ ಈ ಹಿಂದೆಯೇ ನೇಮಿಸಬಹುದಿತ್ತು. ಈಗ ನೇಮಕ ಮಾಡಲು ಮುಂದಾಗಿರುವ ಹಿಂದಿನ ಉದ್ದೇಶಗಳು ಸ್ಪಷ್ಟವಾಗಿಲ್ಲ.