`ಮಂಗಳೂರು ಚಲೋ’ ಬಿಜೆಪಿ ಹುನ್ನಾರ ವಿಫಲಗೊಳಿಸಿದ ಸರಕಾರ

`ಮಂಗಳೂರು ಚಲೋ’ ಹೆಸರಿನಲ್ಲಿ ಕರಾವಳಿಯಲ್ಲಿ ಮತ್ತು ರಾಜ್ಯದ ತುಂಬಾ ಶಾಂತಿ-ಸೌಹಾರ್ದತೆಗಳನ್ನು ಕದಡುವ ಮತ್ತು ಕೋಮುದಳ್ಳುರಿ ಹರಡುವ ಬಿಜೆಪಿ ಯುವ ಮೋರ್ಚಾ ಹಾಕಿಕೊಂಡಿದ್ದ ಯೋಜನೆಯನ್ನು ರಾಜ್ಯ ಸರಕಾರ ವಿಫಲಗೊಳಿಸಿರುವುದು ಒಂದು ಸಕಾರಾತ್ಮಕ ಬೆಳವಣಿಗೆ.

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರುಗಳಿಂದ ಸಾವಿರಾರು ಯುವಕರು ಬೈಕ್ ರ್ಯಾಲಿ ನಡೆಸಿ ಹಿಂಸಾಚಾರ ಪ್ರಚೋದಿಸುವುದು ಬಿಜೆಪಿ ಗುರಿಯಾಗಿತ್ತು. ಕರಾವಳಿಯಲ್ಲಿ ಪರಿವಾರ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್ಡಿಪಿಐ, ಕೆಎಫ್ಡಿ, ಪಿಎಫೈ ಮೊದಲಾದ ಸಂಘಟನೆಗಳನ್ನು ನಿಷೇಧಿಸಬೇಕು. ರಮಾನಾಥ ರೈ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದು ಅವರ ಮುಖ್ಯ ಒತ್ತಾಯಗಳಾಗಿದ್ದವು.

ಸರಕಾರ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರುಗಳಿಂದ ಮಂಗಳೂರಿಗೆ ಬೈಕ್ ರ್ಯಾಲಿಗೆ ನಡೆಸುವ ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತ್ತು. ಮಂಗಳೂರಿನಲ್ಲೂ ದಕ್ಷಿಣ ಕನ್ನಡದ ಇತರ ಭಾಗಗಳಿಂದ ಮಂಗಳೂರಿಗೆ ಬೈಕ್ ರ್ಯಾಲಿಗೂ ಅನುಮತಿ ನಿರಾಕರಿಸಿತ್ತು. ಪಾದಯಾತ್ರೆ ಮತ್ತು ಸಮಾವೇಶಕ್ಕೆ ಅನುಮತಿ ಕೇಳಿದರೆ ಕೊಡಲಾಗುವುದು ಎಂದು ಸರಕಾರ ಹೇಳಿತ್ತು. ಅನುಮತಿ ಪಡೆಯದೆ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಚಿಕ್ಕಮಗಳೂರುಗಳಲ್ಲಿ ಬೈಕ್ ರ್ಯಾಲಿ ನಡೆಸುವ ಬಿಜೆಪಿ ಯುವ ಮೋರ್ಚಾದ ಯತ್ನಗಳನ್ನು ಅದರ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಫಲಗೊಳಿಸಿತು.

ಮಂಗಳೂರಿನಲ್ಲಿ ಸೆಪ್ಟೆಂಬರ್ 7ರಂದು ಜ್ಯೋತಿ ಸರ್ಕಲಿನಿಂದ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ್ಯಾಲಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಿಯೇ ತೀರುವುದಾಗಿ ಬಿಜೆಪಿ ಘೋಷಿಸಿತು. ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಸೆಪ್ಟೆಂಬರ್ 6ರ ಸಂಜೆಯಿಂದಲೇ ಮಂಗಳೂರಿನಲ್ಲಿ ನಿಷೇಧಾಜ್ಞೆ ಹೇರಲಾಯಿತು. ಗಲಭೆಕೋರರನ್ನು ಬಂಧಿಸಲಾಯಿತು. ಇತರ ನಗರಗಳಿಂದ ದ ಕ ಜಿಲ್ಲೆ ಪ್ರವೇಶಿಸುವ ಯತ್ನಗಳನ್ನೂ ವಿಫಲಗೊಳಿಸಲಾಯಿತು.

ಮಂಗಳೂರಿನಲ್ಲಿ ಜ್ಯೋತಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬರುವ ದಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಜ್ಯೋತಿ ಸರ್ಕಲ್ ಬಳಿಯೇ ಬಹಿರಂಗ ಸಭೆ ನಡೆಸಿ, ಆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಬೈಕ್ ರ್ಯಾಲಿ ನಡೆಸುವ ಪ್ರತಿತಂತ್ರವನ್ನು ಬಿಜೆಪಿ ರೂಪಿಸಿತ್ತು. ಇದಕ್ಕಾಗಿ ಜ್ಯೋತಿ ಸರ್ಕಲಿನಲ್ಲಿ ಬೃಹತ್ ಟ್ರಕ್ ತರಿಸಿ ಅದರ ಮೇಲೆ ವೇದಿಕೆ ಸಿದ್ಧಪಡಿಸಲಾಗಿತ್ತು. ಇಲ್ಲಿ ಸುಮಾರು ಮೂರು ಸಾವಿರ ಜನ ಸೇರಿ ಪೊಲೀಸ್ ಕ್ರಮದ ವಿರುದ್ಧ ಪ್ರತಿಭಟಿಸಿದರು. ಯಡ್ಡಿಯೂರಪ್ಪ, ಪ್ರತಾಪಸಿಂಹ ಮುಂತಾದ ಬಿಜೆಪಿ ನಾಯಕರುಗಳ ಭಾಷಣದ ನಂತರ ಅವರನ್ನೂ ಬಂಧಿಸಲಾಯಿತು. ಅದರ ನಂತರ ಪೊಲೀಸ್ ಬ್ಯಾರಿಕೇಡನ್ನು ಬೇಧಿಸಿ ಜಿಲ್ಲಾಧಿಕಾರಿ ಕಚೇರಿಯತ್ತ ನುಗ್ಗಲು ಕೆಲವು ಕಾರ್ಯಕರ್ತರು ಮಾಡಿದ ಯತ್ನವನ್ನು ವಿಫಲಗೊಳಿಸಿ ಅವರನ್ನು ಬಂಧಿಸಲಾಯಿತು. ಈ ನಡುವೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಪೂರ್ವ ಪೊಲೀಸ್ ಇನಸ್ಪೆಕ್ಟರ್ ಮಾರುತಿ ನಾಯಕ್ ಅವರಿಗೆ ಧಮಕಿ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಒಂದು ಸಭಾಂಗಣದಲ್ಲಿ ಕೊಡಿಟ್ಟ ಬಂಧಿಸಲಾದ ಬಿಜೆಪಿ ಕಾರ್ಯಕರ್ತರನ್ನು ಎಫೈಆರ್ ಪ್ರಕ್ರಿಯೆ ನಂತರ ಬಿಡುಗಡೆ ಮಾಡುವುದಾಗಿ ಇನಸ್ಪೆಕ್ಟರ್ ಹೇಳಿದಾಗ “ನಮ್ಮ ಜತೆ ಆಟ ಆಡ್ತೀರಾ ? ಎಫೈಆರ್ ಮಾಡಿದರೆ ಬಂದ್ ಕರೆ ಕೊಡ್ತೀನಿ. ನೀವೇ ಅನುಭವಿಸಬೇಕು” ಎಂದು ಸಂಸದ ಧಮಕಿ ಹಾಕುತ್ತಿರುವುದು ವಿಡಿಯೋದಲ್ಲಿ ಚಿತ್ರಿತವಾಗಿದೆ.

ಬಿಜೆಪಿ ಯುವ ಮೋರ್ಚಾದ `ಮಂಗಳೂರು ಚಲೋ’ ಕಾರ್ಯಕ್ರಮ ಅಮಿತ್ ಶಾ ಬೆಂಗಳೂರು ಭೇಟಿ ನಂತರ ರೂಪಿಸಿದ ಕಾರ್ಯಕ್ರಮ. ರಾಜ್ಯ ಸರಕಾರದ ವಿರುದ್ಧ ಕಾರ್ಯಕ್ರಮಗಳು ಸಾಲದು. ಎಷ್ಟು ಜನರ ಮೇಲೆ ಕೇಸು ಹಾಕಲಾಗಿದೆ ? ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾ ಹೇಳಿದ ನಂತರ `ಮಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದು ಹೇಳಲಾಗಿದೆ.

ಈಗಾಗಲೇ ಹೇಳಿದ ಹಾಗೆ ರಾಜ್ಯದ ತುಂಬ ಶಾಂತಿ-ಸೌಹಾರ್ದತೆಗಳನ್ನು ಕದಡುವುದು ಮತ್ತು ಕೋಮುದಳ್ಳುರಿ ಹರಡುವುದು ಇದರ ಉದ್ದೇಶವಾಗಿತ್ತು. ಪರಿವಾರ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ಕೊಲೆಗಡುಕರನ್ನು ಹಿಡಿಯಲಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಬಿಜೆಪಿ, ಅವರದೇ ಕಾರ್ಯಕರ್ತರಾದ ಪ್ರವೀಣ್ ಪೂಜಾರಿ, ವಿನಾಯಕ ಬಾಳಿಗಾ, ಕಾರ್ತಿಕ್ ರಾಜ್ ಮುಂತಾದವರ ಕೊಲೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರ ಕೊಲೆ ಮಾಡಿದ ಅವರದೇ ಕಾರ್ಯಕರ್ತರನ್ನು ಕಾನೂನು ಕ್ರಮದಿಂದ ಬಚಾವು ಮಾಡಲು ಹರಸಾಹಸ ಮಾಡುತ್ತಿದೆ ಎಂಬುದು ಬಹಿರಂಗ ಗುಟ್ಟು.

ಅದೇ ರೀತಿ ಕಲಬುರ್ಗಿ ಮತ್ತು ಇತ್ತೀಚಿನ ಗೌರಿ ಲಂಕೇಶ್ ಕೊಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಹಲವು ಸಂಘ ಪರಿವಾರದ ನಾಯಕರು ಕಾರ್ಯಕರ್ತರು ಅದನ್ನು ಬೆಂಬಲಿಸಿದ್ದಾರೆ. ಸಂಭ್ರಮಿಸಿದ್ದಾರೆ. ಇತ್ತೀಚಿನ ಶರತ್ ಕೊಲೆಯಲ್ಲಿ ಈಗಾಗಲೇ ಬಂಧನಗಳು ಆಗಿರುವಾಗ ಅದನ್ನು ದೊಡ್ಡ ವಿಷಯ ಮಾಡಿ ಶಾಂತಿ ಕದಡುವುದು ಸರಿಯಲ್ಲ. ಕೋಮುವಾದಿ ಸಂಘಟನೆಗಳ ನಿಷೇಧವೇ ಕರಾವಳಿಯ ಕೋಮುದಳ್ಳುರಿಗೆ ಮದ್ದಾದರೆ ಹಲವು ಕೊಲೆ ಮತ್ತಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಸದಸ್ಯರಾಗಿರುವ ನಾಯಕರಾಗಿರುವ ಬಜರಂಗ ದಳ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್ ಮುಂತಾದ ಸಂಘ ಪರಿವಾರದ ಸಂಘಟನೆಗಳ ನಿಷೇಧಕ್ಕೆ ಅವರ ಒಪ್ಪಿಗೆ ಇದೆಯಾ ? ಕರಾವಳಿಯ ಕೋಮುವಾದೀಕರಣ ಅಪರಾಧೀಕರಣಗಳನ್ನು ವ್ಯವಸ್ಥಿತವಾಗಿ ಮಾಡಿದ ಹಾಗೂ ಆ ಮೂಲಕ ದ್ವೇಷ ಹಿಂಸಾಚಾರದ ವಾತಾವರಣ ಸಂಘ ಪರಿವಾರವೇ ಈಗ ಬೆಳೆಯುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳ ಬೆಳವಣಿಗೆಗಳಿಗೆ ಪ್ರಮುಖ ಕಾರಣ.

ಶಾಂತಿ-ಸೌಹಾರ್ದತೆಗಳನ್ನು ಕದಡುವ ಮತ್ತು ಕೋಮುದಳ್ಳುರಿ ಹರಡುವ ಎಲ್ಲಾ ಮತಾಂಧ ಸಂಘಟನೆಗಳ ವಿಚ್ಛಿದ್ರಕಾರಿ ಚಟುವಟಿಕೆಗಳ ಮೇಲೆ ಕಡಿವಾಣ ಹಾಕುವುದು, ತಡೆಯುವುದು, ಅಗತ್ಯ ಬಿದ್ದರೆ (ಅದು ಪರಿಣಾಮಕಾರಿಯಾಗುವುದಾದರೆ) ಅವುಗಳ ನಿಷೇಧ ಮಾಡುವುದು ಸರಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಆದರೆ ಅದು ಆಂಶಿಕವಾಗಿರಬಾರದು. ಎಲ್ಲಾ ಮತಾಂಧರ ಮೇಲೂ ಸಮಾನವಾಗಿ ನಡೆಯಬೇಕು ಎಂಬುದು ಸೆಕ್ಯುಲರ್ ಮತ್ತು ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ನಿಲುವು. ಅದೇ ರೀತಿ ಸಾಮಾನ್ಯವಾಗಿ ಪಾದಯಾತ್ರೆ, ರ್ಯಾಲಿ, ಸಮಾವೇಶಗಳನ್ನು ನಡೆಸುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕು ಮಾಡಬಾರದು. ಆದರೆ ಅವು ಜನತೆಯ ನಿಜವಾದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಅದಕ್ಕೆ ¥ರಿಹಾರಕ್ಕೆ ಒತ್ತಾಯ ತರುವ ಉದ್ದೇಶ ಉಳ್ಳದ್ದಾಗಿರಬೇಕು. ಮತಾಂಧ ಶಕ್ತಿಗಳು ಸಂಘಟನೆಗಳು ಅದರಲ್ಲೂ ಶಾಂತಿ ಕದಡುವ ಸೌಹಾರ್ದಕ್ಕೆ ಭಂಗ ತರುವ ಕೋಮು ಪ್ರಚೋದನೆ ಮಾಡುವ ದೀರ್ಘ ಇತಿಹಾಸ ಇರುವ ಸಂಘಟನೆಗಳ ಕಾರ್ಯಕ್ರಮಗಳಿಗೆ ಇವು ಅನ್ವಯವಾಗುವುದಿಲ್ಲ. `ಮಂಗಳೂರು ಚಲೋ’ದ ಹಿಂದೆ ಇಂತಹ ಯಾವುದೇ ಜನವಿಭಾಗಗಳ ಸಮಸ್ಯೆ ಪರಿಹಾರದ ಒತ್ತಾಯಗಳೂ ಇರಲಿಲ್ಲ. ಬದಲಾಗಿ ನಿಜವಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸುವ ಮತ್ತು ಚುನಾವಣೆಗೆ ಪೂರ್ವಭಾವಿಯಾಗಿ ಕೋಮುದಳ್ಳುರಿ ಹರಡುವ ಉದ್ದೇಶ ಇದ್ದಿದ್ದರಿಂದ ಈ ಬಗ್ಗೆ ಸರಕಾರ ಕೈಗೊಂಡ ಆಡಳಿತಾತ್ಮಕ ಕ್ರಮಗಳು ಸರಿಯಾಗಿವೆ ಎಂಬುದು ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ನಿಲುವು ಆಗಿದೆ.

ಆದರೆ ಕರಾವಳಿ ಮತ್ತು ಎಲ್ಲೆಡೆ ಮತಾಂಧ ಶಕ್ತಿಗಳ ವಿರುದ್ಧ ಇಂತಹ ಬಿಗಿ ಆಡಳಿತಾತ್ಮಕ ಕ್ರಮಗಳು ಬಹಳ ವಿಳಂಬವಾಗಿದೆ ಮತ್ತು ಇನ್ನೂ ಬಹಳ ಸೀಮಿತವಾಗಿವೆ. ಕಳೆದ ನಾಲ್ಕು ರ್ಷಗಳಲ್ಲಿ ಆಡಳಿತಾತ್ಮಕವಾಗಿಯೂ ರಾಜಕೀಯವಾಗಿಯೂ ಮತಾಂಧ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಕಾರಣ ಇಂದಿನ ಗಂಭೀರ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಇನ್ನೂ ಕಾಂಗ್ರೆಸ್ ಮತಾಂಧ ಶಕ್ತಿಗಳ ವಿರುದ್ಧ ಹೋರಾಡುವ ರಾಜಕೀಯ ಇಚ್ಛಾಶಕ್ತಿ ತೋರಿಸಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಈಗ ಕೈಗೊಂಡಿರುವ ಬಿಗಿ ಆಡಳಿತಾತ್ಮಕ ಕ್ರಮಗಳು ಸಹ ಚುನಾವಣಾ ರಾಜಕೀಯ ಉದ್ದೇಶಗಳಿಗೆ ಸೀಮಿತವಾಗಿವೆ ಎಂಬುದನ್ನೂ ಎಡ ಪ್ರಜಾಸತ್ತಾತ್ಮಕ ಶಕ್ತಿಗಳು ಗಮನಿಸಿ ಅದಕ್ಕಾಗಿ ಒತ್ತಾಯಿಸಬೇಕು.

  • ಎಂ ಕೆ ಮಂಗಳೂರು (`ಜನಶಕ್ತಿ’ಯಿಂದ)