ವೈದ್ಯಕೀಯ ಕಾಲೇಜು ಸ್ಥಾಪಿಸದ ಸರ್ಕಾರದ ವಿರುದ್ಧ ಸರ್ವಪಕ್ಷ ಟೀಕೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡದ ಸರ್ಕಾರದ ವಿರುದ್ಧ ಅಸೆಂಬ್ಲಿಯಲ್ಲಿ ಆಡಳಿತ ಮತ್ತು ವಿಪಕ್ಷ ಶಾಸಕರು ಟೀಕಿಸಿದ್ದಾರೆ.

“ನನ್ನ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 2013 ಮಾರ್ಚಿನಲ್ಲಿ ಸಂಪುಟ ಮಂಜೂರಾತಿ ನೀಡಿದೆ. ಆದರೆ ಸರ್ಕಾರ ಈವರೆಗೂ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ಕ್ರಮ ಕೈಗೊಂಡಿಲ್ಲ” ಎಂದು ಬಿಜೆಪಿ ಶಾಸಕ ಸಿ ಟಿ ರವಿ ದೂರಿದರು.

ತುಮಕೂರು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮಂಜೂರಾತಿ ಸಿಕ್ಕಿದ್ದರೂ ಇದುವರೆಗೆ ಕಾಲೇಜು ಸುದ್ದಿಯೇ ಇಲ್ಲ ಎಂದು ಕಾಂಗ್ರೆಸ್ ಶಾಸಕ ರಾಜಣ್ಣ ಬೇಸರ ವ್ಯಕ್ತಪಡಿಸಿದರು.

10 ವರ್ಷಗಳ ಹಿಂದೆ ಹಾಸನದಲ್ಲಿ ವೈದ್ಯಕೀಯ ಕಾಲೇಜೊಂದು ಸ್ಥಾಪಿಸಲಾಗಿದ್ದರೂ, ಇದುವರೆಗೆ ಇಲ್ಲಿ ಸ್ನಾತಕೋತ್ತರ ತರಗತಿ ಆರಂಭಗೊಂಡಿಲ್ಲ ಎಂದು ಜೆಡಿಎಸ್ ಶಾಸಕ ರೇವಣ್ಣ ಟೀಕಿಸಿದರು.

ಕಿದ್ವಾಯಿ ಕ್ಯಾನ್ಸರ್ ಮೆಡಿಕಲ್ ಕಾಲೇಜಿಗೆ ಪಿಇಟಿ ಸ್ಕ್ಯಾನ್ ಖರೀದಿಸುವ ಪ್ರಸ್ತಾವ ಸರ್ಕಾರ ತಿರಸ್ಕರಿಸಿದ ವಿರುದ್ಧ ಬಿಜೆಪಿ ಶಾಸಕ ನಾರಾಯಣಸ್ವಾಮಿ ಟೀಕಿಸಿದರು. “ವಿವಿಧ ಹಂತದಲ್ಲಿರುವ ಕ್ಯಾನ್ಸರ್ ಪತ್ತೆಗೆ ಈ ಉಪರಣ ಉಪಯುಕ್ತವಾಗಿದೆ. ವಾರ್ಷಿಕವಾಗಿ ಇಲ್ಲಿ 25,000 ರೋಗಿಗಳು ಪ್ರವೇಶ ಪಡೆಯುತ್ತಾರೆ. ಹೀಗಿದ್ದರೂ ಆರ್ಥಿಕ ಇಲಾಖೆ ಕ್ಯಾನ್ಸರ್ ಸಂಸ್ಥೆಗೆ ಸಂಬಂಧಿಸಿದ ಈ ಪ್ರಸ್ತಾವ ತಿರಸ್ಕರಿಸಿರುವುದು ದುರಂತವೇ ಸರಿ” ಎಂದರು.

ಸರ್ಕಾರ ಕಿದ್ವಾಯಿ ಸಂಸ್ಥೆಗೆ ಶೀಘ್ರ ಮಹತ್ವ ಉಪಕರಣ ಖರೀದಿಸಲಿದೆ ಎಂದು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಪರವಾಗಿ ಸಚಿವ ಖಾದರ್ ಭರವಸೆ ನೀಡಿದರು.

LEAVE A REPLY