ಶಿಕ್ಷಣ ಕಾಯಿದೆಗೆ ತಿದ್ದುಪಡಿ ತರಲು ಸರಕಾರದ ನಿರ್ಧಾರ

ಬೆಂಗಳೂರು : ಅಲಾಯನ್ಸ್ ಯುನಿವರ್ಸಿಟಿ ಮಾಲಕತ್ವದ ವಿಚಾರದಲ್ಲಿ ಇಬ್ಬರು ಸಹೋದರರ ನಡುವಿನ ಜಗಳದಿಂದಾಗಿ ಸಂಸ್ಥೆಯ ವಿದ್ಯಾರ್ಥಿಗಳು ಬಾಧಿತರಾಗಿರುವ ಘಟನೆಯ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆದಾಗ ಸರಕಾರಕ್ಕೆ ಹಸ್ತಕ್ಷೇಪ ನಡೆಸಲು ಅನುಕೂಲವಾಗುವಂತೆ ಕರ್ನಾಟಕ ಶಿಕ್ಷಣ ಕಾಯಿದೆಗೆ ತಿದ್ದುಪಡಿ ತರಲು ಸರಕಾರ ನಿರ್ಧರಿಸಿದೆ. ಪ್ರಸ್ತುತ ನಿಯಮಗಳಂತೆ ಖಾಸಗಿ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಹಸ್ತಕ್ಷೆಪ ನಡೆಸುವ ಯಾ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕಿಲ್ಲವಾಗಿದೆ.

“ಅಲಾಯನ್ಸ್ ಯುನಿವರ್ಸಿಟಿ ವಿವಾದದಿಂದ ಸಮಸ್ಯೆಯೆದುರಾದಂತಹ ಸಂದರ್ಭ ಮುಂದೆಯೂ ಬಂದರೆ ಸರಕಾರ ಅಂತಹ ಸಂಸ್ಥೆಗಳ ಜವಾಬ್ದಾರಿ ವಹಿಸಿವುದು ಸಾಧ್ಯವಾಗುವಂತೆ ಮಾಡುವುದು ಅಗತ್ಯವಾಗಿದೆ. ಸಾಮಾನ್ಯ ತಿದ್ದುಪಡಿ ತಂದು ಅದು ಎಲ್ಲಾ ಖಾಸಗಿ ವಿ ವಿ.ಗಳಿಗೆ ಅನ್ವಯವಾಗುವಂತೆ ಮಾಡಲಾಗುವುದು” ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆಯುವುದಾಗಿ ಅವರು ತಿಳಿಸಿದ್ದಾರೆ. ತಿದ್ದುಪಡಿಗಳನ್ನು ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಶಿಕ್ಷಣವನ್ನು ಬಾಧಿಸಿದ್ದಕ್ಕಾಗಿ ಅಲಾಯನ್ಸ್ ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಐದು ಆದೇಶಗಳು ವಿವಿಧ ಕೋರ್ಟುಗಳಿಂದ ಬಂದಿವೆ. ಇವುಗಳ ಬಗ್ಗೆ ಸಾಕಷ್ಟು ಗೊಂದಲವಿದೆಯೆಂದೂ ಸಚಿವರು ತಿಳಿಸಿದರು.