ರಾಜ್ಯಪಾಲರು ಇಷ್ಟೊತ್ತಿಗೆ ಕನ್ನಡ ಕಲಿಯಬಹುದಿತ್ತು

ಇತ್ತೀಚೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿ ಭಾಷೆಯಲ್ಲಿ ಮಾತನಾಡಿದ ರಾಜ್ಯದ ರಾಜ್ಯಪಾಲರಾದ ವಜೂಭಾಯಿ ವಾಲಾ ಬಗ್ಗೆ ಟೀಕೆ ಟಿಪ್ಪಣಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ.
ಈ ಹಿಂದೆಯೂ ಇಂತಹ ಪ್ರಕರಣ ನಡೆದಿದ್ದವು. ರಾಜ್ಯದ ಆಡಳಿತ ಭಾಷೆಯಲ್ಲಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ಮಾತನಾಡಬೇಕೆಂಬ ಒತ್ತಾಯ ತಪ್ಪೇನಲ್ಲ.
ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಸೇರಿದಂತಹ ವ್ಯಕ್ತಿಗಳನ್ನು ರಾಜ್ಯಪಾಲರಾಗಿ ನೇಮಿಸುವ ಸಂಪ್ರದಾಯವಿರುವುದರಿಂದ ಭಾಷೆಯ ತೊಡಕು ರಾಜ್ಯಪಾಲರನ್ನು ಕಾಡುವುದು ಸಾಮಾನ್ಯ ಸಂಗತಿ.
ರಾಜ್ಯದ ಆಡಳಿತ ಭಾಷೆಯನ್ನು ಕಲಿತು ಅದರಲ್ಲೇ ಭಾಷಣ ಮಾಡುವ ಅವಕಾಶ ರಾಜ್ಯಪಾಲರಿಗೆ ಇದ್ದೇ ಇದೆ. ಅಖಿಲ ಭಾರತ ಸೇವೆಗೆ ಸೇರಿದ ಹಲವಾರು ಅಧಿಕಾರಿಗಳು ಕನ್ನಡ ಕಲಿತು ಸಂಪೂರ್ಣವಾಗಿ ಕನ್ನಡದಲ್ಲೇ ವ್ಯವಹರಿಸುವ ಹಲವಾರು ಉದಾಹರಣೆಗಳೂ ಇವೆ.
ಮಾಜಿ ಪ್ರಧಾನಿ ದಿವಂಗತ ಪಿ ವಿ ನರಸಿಂಹರಾವ್ ಅವರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳು ಬರುತ್ತಿದ್ದವು. ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಪಂಜಾಬ್ ಮೂಲದವರಾದ ಚಿರಂಜೀವಿ ಸಿಂಗ್ ಕನ್ನಡದಲ್ಲಿ ಅತ್ಯಂತ ಸುಲಲಿತವಾಗಿ ಮಾತನಾಡುತ್ತಾರೆ. 1996ರಲ್ಲಿ ಪ್ರಧಾನಮಂತ್ರಿಯಾಗಿ ನೇಮಕಗೊಂಡ ಪ್ರಪ್ರಥಮ ಕನ್ನಡಿಗ ಎಚ್ ಡಿ ದೇವೇಗೌಡ ಅವರು ಹಿಂದಿ ಭಾಷೆ ಕಲಿಯಲು ಶಿಕ್ಷಕರೊಬ್ಬರನ್ನು ನೇಮಿಸಿಕೊಂಡಿದ್ದರ ಬಗ್ಗೆ ಪತ್ರಿಕೆಗಳಲ್ಲಿ ಓದಿದ ನೆನಪು. ಅದೇನೇ ಇರಲಿ. ಇಚ್ಛಾಶಕ್ತಿ ಎಂಬುದೊಂದಿದ್ದರೆ ರಾಜ್ಯಪಾಲರು ಕನ್ನಡ ಕಲಿತು ಮಾತನಾಡುವುದು ದೊಡ್ಡ ವಿಷಯವಾಗಲಾರದು

  • ಎಂ ಅವಿನಾಶ್,  ಅಶೋಕನಗರ