`ವರ್ಗಾವಣೆಗೊಂಡ ಸರಕಾರಿ ನೌಕರ ಕಡ್ಡಾಯ ನಿರೀಕ್ಷಣೆಯಲ್ಲಿ ಇರುವಂತಿಲ್ಲ’

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಸರಕಾರಿ ನೌಕರರ ವರ್ಗಾವಣೆಗಳಲ್ಲಿ ಸಂಭವಿಸುವ ಆಡತಾತ್ಮಕ ಸಂದಿಗ್ಧತೆಗಳಿಗೆ ಸರಕಾರ ಪರಿಹಾರ ಕ್ರಮವನ್ನು ಸೂಚಿಸಿದೆ.

ಯಾವುದೇ ನೌಕರನು ತಾನು ವರ್ಗಾವಣೆ ಹೊಂದಿದ ಪರಿಣಾಮವಾಗಿ ಹುದ್ದೆಯಲ್ಲದೆ ಕಡ್ಡಾಯ ನಿರೀಕ್ಷಣೆಯಲ್ಲಿ ಇನ್ನು ಮುಂದೆ ಉಳಿಯುವಂತಿಲ್ಲ. ಸರಕಾರಿ ನೌಕರನ ವರ್ಗಾವಣೆಯ ಸಂಬಂಭ ಸರಕಾರ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಮಾರ್ಗದರ್ಶನವನ್ನು ಪುನರುಚ್ಛರಿಸಿ ಮತ್ತೊಮ್ಮೆ ಸೂಚನೆಗಳನ್ನು ನೀಡಿದೆ.

ಇದೇ ಸೂಚನೆಯನ್ವಯ 2013 ಜೂನ್ 7ರ ಸರಕಾರಿ ಆದೇಶದಲ್ಲಿನ ಪ್ಯಾರಾ 5ರಲ್ಲಿನ ಶರ್ತಗಳನ್ನು ಪಾಲನೆ ಮಾಡುವುದರೊಂದಿಗೆ ಯಾವುದೇ ನೌಕರ ವರ್ಗಾವಣೆಗೊಂಡು ಹುದ್ದೆಯಿಲ್ಲದೆ ಕಡ್ಡಾಯ ನಿರೀಕ್ಷಣೆಯಲ್ಲಿ ಉಳಿಯಬಾರದು ಮತ್ತು ಹುದ್ದೆ ಲಭ್ಯವಿರುವ ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ ನೇಮಕ ಹೊಂದಿದ ಹುದ್ದೆಗೆ ಸೇರ್ಪಡೆಗೊಳ್ಳಲು ಅಸಾಧ್ಯವಾದಲ್ಲಿ ಆತ ನೇರವಾಗಿ ಇಲಾಖೆಯ ಮುಖ್ಯಸ್ಥರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಈ ರೀತಿ ಇಲಾಖಾ ಮುಖ್ಯಸ್ಥರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ನೌಕರನು ಇಲಾಖೆ ಮುಖ್ಯಸ್ಥರು ನೀಡುವ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಂತಹ ನೌಕರರು ಮುಂದೆ ವರ್ಗಾವಣೆ ದೊರೆತಾಗ ಅಂತಹ ವರ್ಗಾವಣೆಯನ್ನು ಅಕಾಲಿಕ ವರ್ಗಾವಣೆ ಎಂದು ಪರಿಗಣಿಸುವಂತಿಲ್ಲ ಎನ್ನುವುದನ್ನು ಕೂಡ ಸರಕಾರ ಸ್ಪಷ್ಟಪಡಿಸಿದೆ.