ಶಿಯಾ ಮುಸ್ಲಿಮರಿಂದ ಗೋರಕ್ಷಕ ಪಡೆ

ಲಕ್ನೋ : ಲಕ್ನೋ ನಗರದ ಶಿಯಾ ಮುಸ್ಲಿಮರ ಗುಂಪೊಂದು ಗೋ ರಕ್ಷಕ ದಳವನ್ನು ರಚಿಸಿದ್ದು ಗೋವುಗಳನ್ನು ಕಸಾಯಿಖಾನೆಗಳಿಂದ ರಕ್ಷಿಸಲು ಪಣ ತೊಟ್ಟಿದೆ. ಶಿಯಾ ಗೋರಕ್ಷಕ ದಳದ ಅಧ್ಯಕ್ಷರಾದ ಶಮಿಲ್ ಶಂಸಿ ದೇಶದಲ್ಲಿ ಗೋಹತ್ಯೆಯನ್ನು ತಡೆಗಟ್ಟಲು ಶಪಥ ಮಾಡಿದ್ದಾರೆ.

ಶಿಯಾಗಳೇ ಹೆಚ್ಚಾಗಿರುವ ಲಕ್ನೋದ ಇಮಂಬರಾ ಜೈನುಬೆದಿನದಲ್ಲಿ ಸಭೆ ಸೇರಿದ್ದ ಶಿಯಾ ಯುವಕರು ತಮ್ಮ ಮೌಲ್ವಿಗಳ ಸಮ್ಮತಿ ಪಡೆದ ನಂತರವೇ ಈ ಹೆಜ್ಜೆ ಇಟ್ಟಿದ್ದಾರೆ. “ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಮ್ಮ ಸಂಘಟನೆಯನ್ನು ಎಲ್ಲ ರಾಜ್ಯಗಳಲ್ಲೂ ಸ್ಥಾಪಿಸುತ್ತೇವೆ. ಗೋ ರಕ್ಷಣೆ ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದ್ದು ನಮ್ಮ ಪ್ರಾಂತ್ಯದಲ್ಲಿ ನಡೆಯುವ ಯಾವುದೇ ಗೋ ಹತ್ಯೆ ಪ್ರಕರಣವನ್ನು ಪೊಲೀಸರಿಗೆ ತಿಳಿಸುತ್ತೇವೆ” ಎಂದು ಶಮಿಲ್ ಹೇಳಿದ್ದಾರೆ.

ಏಪ್ರಿಲ್ 5ರಂದು ನಡೆದ ಸಭೆಯಲ್ಲಿ ಅಖಿಲ ಭಾರತ ಶಿಯಾ ಮುಸ್ಲಿಂ ಕಾನೂನು ಮಂಡಲಿ ಭಾರತದಲ್ಲಿ ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸಿತ್ತು. ಮತ್ತೊಬ್ಬ ಶಿಯಾ ಮೌಲ್ವಿ ಅಲ್ಲಮ ಅಲಿ ನಾಸಿರ್ ಅಬಾಕತ್ ಆಘಾ ರೂಹಿ ಸಹ ಗೋ ಹತ್ಯೆ ನಿಷೇಧಿಸಲು ಆಗ್ರಹಿಸಿದ್ದರು. 1960ರಲ್ಲಿ ಇರಾಕಿನ ಮುಸ್ಲಿಂ ನೇತಾರರು ಗೋಹತ್ಯೆ ವಿರುದ್ಧ ಫತ್ವಾ ಹೊರಡಿಸಿದ ದಿನದಿಂದ ಶಿಯಾ ಮುಸ್ಲಿಮರು ಗೋಮಾಂಸ ಸೇವಿಸಿಲ್ಲ ಎಂದು ರೂಹಿ ಹೇಳಿದ್ದಾರೆ. ಭಾರತದ ಎಲ್ಲ ಮುಸ್ಲಿಂ ಮೌಲ್ವಿಗಳು ಗೋಹತ್ಯೆ ನಿಷೇದಕ್ಕೆ ಬೆಂಬಲ ನೀಡುವಂತೆ ಕೋರಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲಾಗಿದೆ.