ಕಪ್ಪು ಹಣವಿರುವ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ?

ಗೋಪಾಲ ಭಂಡಾರಿ

ಗೋಪಾಲ ಭಂಡಾರಿ ಪ್ರಶ್ನೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : “ಕಾಂಗ್ರೆಸ್ ಈ ದೇಶದಲ್ಲಿ ಸಾಮಾನ್ಯ ಜನರಿಗೆ ಬದುಕನ್ನು ಕಟ್ಟಿಕೊಟ್ಟಂತಹ ಹಾಗೂ ವ್ಯವಸ್ಥಿತವಾಗಿ ಸಮಾಜವನ್ನು ನಿರ್ಮಿಸಿದಂತಹÀ ಒಂದು ಪಕ್ಷವಾಗಿದೆ. ಇದೀಗ ನೋಟು ಅಮಾನ್ಯದಿಂದ ಗೊಂದಲ ಉಂಟುಮಾಡಿದ ವ್ಯವಸ್ಥೆ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಹಾಗೂ ಪಕ್ಷದ ವಿವಿಧ ಘಟಕಗಳ ವತಿಯಿಂದ ಕೇಂದ್ರದ ನರೇಂದ್ರ ಮೋದಿ ಸರಕಾರದ ಅರ್ಥಿಕ ದೋರಣೆ ವಿರೋಧಿಸಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಚುನಾವಣೆ ಮುನ್ನ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಿಸಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಇದೀಗ ಅದರ ವಿಚಾರದಲ್ಲಿ ಮಾತನಾಡುತ್ತಿಲ್ಲ. ನಂತರ ಮನೆ ಮನೆಗೆ ತೆರಳಿ ಜನ್ ಧನ್ ಖಾತೆಯನ್ನು ಮಾಡಿಸಿ ಆ ಖಾತೆಗೆ ಮೂಲಕ 5 ಸಾವಿರ ರೂ ಹಾಕಲಾಗುವುದು ಎಂದು ಆಸೆ ತೋರಿಸಿ ಈವರೆಗೂ ನಯಾ ಪೈಸಾ ಹಣ ಬರದೆ ಮುಗ್ದ ಜನರಿಗೆ ಯಾಮಾರಿಸಿದ್ದು ಬಹಳ ಬೇಸರದ ಸಂಗತಿ. ಇದೀಗ ಜನರು ತಮ್ಮದೇ ಹಣ ಪಡೆಯಲು ಬಿಸಿಲಿನಲ್ಲಿ ನಿಂತು ಸೋತಿದ್ದಾರೆ. ಈಗಾಗಲೇ ದೇಶದಲ್ಲಿ 60ಕ್ಕೂ ಅಧಿಕ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಕಪ್ಪು ಹಣ ಇದ್ದವರು ಈವರೆಗೆ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಅಂತಹ ಘಟನೆ ನಡೆದಿದ್ದರೆ ಅದನ್ನು ಬೊಟ್ಟು ಮಾಡಿ ತೋರಿಸಲಿ” ಎಂದು ಸವಾಲು ಎಸೆದರು.

“ಆಪತ್ಕಾಲಕ್ಕೆ ಇಟ್ಟಿದ್ದ ಅಲ್ಪಸ್ವಲ್ಪ ಹಣವನ್ನು ಚಲಾವಣೆ ಮಾಡಲಾಗದೆ ಜನರು ಕಷ್ಟ ಪಡುತ್ತಿದ್ದಾರೆ. ಸಂಪೂರ್ಣ ಅಧಿಕಾರ ಇರುವ ಪ್ರದಾನಿ ಮೋದಿಯವರು ಕಪ್ಪು ಹಣ ಇರುವವರನ್ನು ಹಿಡಿದು ಜೈಲಿಗೆ ಅಟ್ಟಲಿ. ಈವರೆಗೆ ಕಪ್ಪು ಹಣ ಇರುವವರ ಪೈಕಿ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ?” ಎಂದು ಪ್ರಶ್ನಿಸಿದರು.

“ಕಾರ್ಕಳದಲ್ಲಿ ಕಪ್ಪು ಹಣ ಇದ್ದಂತಹವರು ಕಾರ್ಮಿಕರ ಖಾತೆಗೆ ಒಂದು ತಿಂಗಳ ಸಂಬಳವನ್ನು ಮೊದಲೇ ಜಮೆ ಮಾಡಿ ಅವರಿಗೆ ಬಿಪಿಎಲ್ ಕಾರ್ಡು ರದ್ದು ಆಗುವ ಸ್ಥಿತಿ ಮಾಡಿದ್ದಾರೆ” ಎಂದು ಭಂಡಾರಿ ದೂರಿದರು.