2020ರ ವೇಳೆಗೆ ಡೆಬಿಟ್ ಕಾರ್ಡ್, ಎಟಿಎಂಗೆ ವಿದಾಯ ?

ಅಮಿತಾಬ್ ಕಾಂತ್

ನವದೆಹಲಿ : 2020ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯಲ್ಲಿ ಎಟಿಎಂ, ಡೆಬಿಟ್ ಕಾರ್ಡ್ ಮತ್ತು ಸ್ವೈಪಿಂಗ್ ಯಂತ್ರಗಳ ಬಳಕೆಯೇ ಇಲ್ಲವಾಗಿರುತ್ತದೆ ಎಂದು  ಕೇಂದ್ರ ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್ ಕಾಂತ್ ಹೇಳಿದ್ದಾರೆ.

2017ರ ಪ್ರವಾಸಿ ಭಾರತೀಯ ದಿವಸ್ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅಮಿತಾಬ್ ಕಾಂತ್ ಶಿಕ್ಷಣ, ಆರೋಗ್ಯ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಭಾರತ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದು ಅತ್ಯವಶ್ಯ ಎಂದು ಹೇಳಿದ್ದಾರೆ.

ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಎಲ್ಲ ವ್ಯವಹಾರಗಳನ್ನು ಹೆಬ್ಬೆಟ್ಟಿನ ಗುರುತು ಮತ್ತು ಮೊಬೈಲ್ ಮೂಲಕವೇ ಮಾಡುವುದಲ್ಲದೆ ಆಧಾರ್ ಆಧಾರಿತ ತಂತ್ರಜ್ಞಾನದ ಮೂಲಕ ಕ್ಷಣ ಮಾತ್ರದಲ್ಲಿ ವ್ಯವಹಾರ ನಡೆಸಲು ಅವಕಾಶ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ. ಅಮಾನ್ಯೀಕರಣದಿಂದ ಭಾರತ ಡಿಜಿಟಲ್ ಆರ್ಥಿಕ ವ್ಯವಸ್ಥೆಯೆಡೆಗೆ ದಾಪುಗಾಲು ಹಾಕುತ್ತಿದೆ ಎಂದು ಅಮಿತಾಬ್ ಹೇಳಿದ್ದಾರೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಶೇ 35ರಷ್ಟು ಕಪ್ಪುಹಣ ಚಾಲನೆಯಲ್ಲಿದ್ದು ಪರ್ಯಾಯ ಅರ್ಥವ್ಯವಸ್ಥೆ ಜಾರಿಯಲ್ಲಿದ್ದರೆ ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಅಮಿತಾಬ್ ಕಾಂತ್ ನಗರ ಪ್ರದೇಶಗಳ ಜನರಿಗಿಂತಲೂ ಗ್ರಾಮೀಣ ಪ್ರದೇಶದ ಜನತೆ ತಂತ್ರಜ್ಞಾನವನ್ನು ಶೀಘ್ರವಾಗಿ ಅಳವಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಪ್ರಸ್ತುತ 662 ದಶಲಕ್ಷ ಡೆಬಿಟ್ ಕಾರ್ಡ್ ಮತ್ತು 25 ದಶಲಕ್ಷ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿದೆ. 30 ಕೋಟಿ ಮೊಬೈಲ್ ಗ್ರಾಹಕರು ಅಂತರ್ಜಾಲ ಸಂಪರ್ಕ ಹೊಂದಿದ್ದಾರೆ. ಅಮಾನ್ಯೀಕರಣದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ನಗದು ವಹಿವಾಟು ಹೆಚ್ಚಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದರಿಂದ ದೇಶದಲ್ಲಿ ಹುದುಗಿರುವ ಕಪ್ಪು ಹಣ ನಿರ್ನಾಮವಾಗುತ್ತದೆ ಎಂದಿದ್ದಾರೆ.

ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರ `ಭೀಮ್ ಆಪ್’ ಜಾರಿಗೊಳಿಸಿದ್ದು ಈ ತಂತ್ರಜ್ಞಾನದ ಮೂಲಕ ತಮ್ಮ ಆಧಾರ್ ಕಾರ್ಡ್ ಮೂಲಕ ಜನಸಾಮಾನ್ಯರು ಹಣವನ್ನು ಪಡೆಯಲು ಸಾಧ್ಯವಿದೆ. ಆದರೆ ಅನೇಕ ಅರ್ಥಿಕ ತಜ್ಞರು ಮತ್ತು ವಿಶ್ಲೇಷಕರು ಅಮಾನ್ಯೀಕರಣ ನೀತಿಯನ್ನು ಖಂಡಿಸಿದ್ದು ಇದರಿಂದ ಉಂಟಾಗಿರುವ ನಗದು ಕೊರತೆ ಮತ್ತು ಜನಸಾಮಾನ್ಯರಿಗೆ ಒದಗಿರುವ ಸಂಕಷ್ಟದ ಬಗ್ಗೆ ಆತಂಕ ಕಳವಳ ವ್ಯಕ್ತಪಡಿಸಿದ್ದಾರೆ.

ಅಮಾನ್ಯೀಕರಣ ಜಾರಿಗೊಂಡು ಎರಡು ತಿಂಗಳಾದರೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಗದು ಕೊರತೆ ಇನ್ನೂ ಕಡಿಮೆಯಾಗದಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.