`ಸಮಾಜದ ಅಭಿದೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ’

ಚಂದ್ರಶೇಖರ್ ಮಾತನಾಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಶಿಕ್ಷಣ ನಾಡಿನ ಪ್ರಗತಿಯ ದ್ಯೋತಕ. ಶಿಕ್ಷಣ ಕ್ರಾಂತಿಯಿಂದ ಸಮುದಾಯ, ಸಮಾಜದ ಅಭ್ಯುದಯ ಸಾಧ್ಯ” ಎಂದು ಕಂದಾಯ ಸಚಿವ ಇ ಚಂದ್ರಶೇಖರನ್ ಅಭಿಪ್ರಾಯಪಟ್ಟರು.

ಮೀಯಪದವು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಿಂದುಳಿದ ಕೃಷಿ ಕಾರ್ಮಿಕ ವಿಭಾಗದಿಂದ ಬಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಿದ ಸಂಸ್ಥೆ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಎಂದರು.ಸಂಸ್ಥಾಪಕರ ದೂರದೃಷ್ಟಿಯಿಂದ ಸಮುದಾಯ, ಸಮಾಜದ ಏಳಿಗೆಗೆ ಕಾರಣವಾದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾದ ಪ್ರಬಂಧಕ, ಅಧ್ಯಾಪಕರ ಶ್ರಮವನ್ನು ಶ್ಲಾಘಿಸಿದರು.

ವಿವಿಧ ಜಾತಿ, ವರ್ಗದಿಂದ ಬಂದ ವಿದ್ಯಾರ್ಥಿಗಳ ಏಳಿಗೆಗೆ ಶಾಲೆಗಳ ಕೊಡುಗೆ ಅಪಾರ. ಇಂತಹ ಅಪರೂಪದ ಶಾಲೆಗಳಲ್ಲಿ ವಿದ್ಯಾವರ್ಧಕ ಶಾಲೆಯು ಒಂದಾಗಿದೆ ಎಂದರು. ದಶಕಗಳ ಹಿಂದೆ ವಿದ್ಯಾಭ್ಯಾಸವು ಹಲವು ಸಮುದಾಯಗಳಿಗೆ ಗಗನಕುಸುಮವಾಗಿತ್ತು ಅಂತಹ ಸಂದರ್ಭ ಜಾತ್ಯತೀತ ಮನೋಭಾವವನ್ನು ಜನಸಾಮಾನ್ಯರಲ್ಲಿ ಬಿತ್ತಿ ನಾಡಿಗೆ ಕೊಡುಗೆ ಕೊಟ್ಟ ಶಾಲೆಗಳಲ್ಲಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಒಂದಾಗಿದೆ ಎಂದರು.

ಶಿಕ್ಷಣ ಸಾಮಾನ್ಯ ಜನ ಸಮುದಾಯದ ಅಭ್ಯುದಯಕ್ಕೆ ಕಾರಣವಾಗಿದ್ದು, ಶಿಕ್ಷಣ ಸಂಸ್ಥೆಗಳು ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರೂ ಉನ್ನತಿಯನ್ನು ಕಾಣಬಹುದಾದ ಪುಣ್ಯ ಕೇಂದ್ರ ಎಂದರು. ವಿದ್ಯಾಲಯಗಳ ಬಗ್ಗೆ ಅಪಾರ ಗೌರವವಿರಬೇಕಲ್ಲದೆ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಎಲ್ಲರೂ ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು. ಸಂಸ್ಥೆಯಲ್ಲಿ ವರ್ಷಗಳ ಹಿಂದೆ ಹೈಯರ್ ಸೆಕೆಂಡರಿ ಆರಂಭವಾಗಿದ್ದು, ಪ್ರಸ್ತುತ ಅಗತ್ಯತೆಯನ್ನು ಮನಗಂಡು ವಿಜ್ಞಾನ ವಿಭಾಗವನ್ನು ಆರಂಭಿಸಲು ಸರಕಾರದ ವತಿಯಿಂದ ಸಹಾಯ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಕೇಂದ್ರಗಳು ಆರಂಭವಾಗಬೇಕು, ಮೀಯಪದವು ಪ್ರದೇಶದಂತಹ ಸ್ಥಳದಲ್ಲಿ ಇಂತಹ ಶಿಕ್ಷಣ ಕ್ರಾಂತಿಗೆ ಅಗತ್ಯವಾದ ಎಲ್ಲ ಸಹಕಾರವನ್ನು ಸರಕಾರದ ವತಿಯಿಂದ ನೀಡಲು ಸಿದ್ಧ ಎಂದು ಸಚಿವರು ಹೇಳಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.